ಬೆಳಗಾವಿ: ಹಳೆಯ ವೈಷಮ್ಯ ಹಾಗೂ ರಾಜಕೀಯ ವಿರೋಧದ ಹಿನ್ನೆಲೆಯಲ್ಲಿ ಸಿದ್ದೇಶ್ವರ ಜಾತ್ರೆ ವೇಳೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ಸಂಗನಗೌಡ ಪಾಟೀಲ್ (50) ಕೊಲೆಯಾದ ದುರ್ದೈವಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕೊಲೆಯಾದ ಸಂಗನಗೌಡ ಮತ್ತು ಆರೋಪಿಗಳ ಕುಟುಂಬದ ನಡುವೆ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ತೀವ್ರ ವೈಷಮ್ಯವಿತ್ತು. ಇತ್ತೀಚೆಗೆ ಗ್ರಾಮದಲ್ಲಿ ನಡೆದ ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ, ಸಂಗನಗೌಡ ತನ್ನ ರಾಜಕೀಯ ವಿರೋಧಿಗಳ ಮನೆಯ ಮುಂದೆ ಕುಣಿದಿದ್ದಾನೆ. ಇದು ಆರೋಪಿಗಳ ಕೆಂಗಣ್ಣಿಗೆ ಗುರಿಯಾಗಿದೆ.
“ನಮ್ಮ ಮನೆಯ ಮುಂದೆ ಕುಣಿಯಬೇಡ” ಎಂದು ಆರೋಪಿಗಳು ಸಂಗನಗೌಡನಿಗೆ ಎಚ್ಚರಿಕೆ ನೀಡಿದ್ದರು. ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ಹೋಗಿದೆ.
ಮಾರಕಾಸ್ತ್ರಗಳಿಂದ ಹಲ್ಲೆ:
ಗಲಾಟೆಯ ಬೆನ್ನಲ್ಲೇ ಆಕ್ರೋಶಗೊಂಡ ಆರೋಪಿಗಳು ಕುಡಗೋಲು, ಕೊಡಲಿ ಹಾಗೂ ಕಬ್ಬಿಣದ ರಾಡ್ಗಳಿಂದ ಸಂಗನಗೌಡನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಂಗನಗೌಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಎಂಟು ಮಂದಿ ಆರೋಪಿಗಳ ಬಂಧನ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು:
-
ದೇಮಪ್ಪ ಬಳಗನ್ನವರ
-
ಮಂಜುನಾಥ ಬಳಗನ್ನವರ
-
ರುದ್ರಪ್ಪ
-
ವಿಜಯ್
-
ಸೂರಪ್ಪ
-
ಸಿದ್ದಪ್ಪ
-
ನಾಗರಾಜ
-
ಬಸವಂತಪ್ಪ ಎಂದು ಗುರುತಿಸಲಾಗಿದೆ.
ಸದ್ಯ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಸಾಗರ ನಗರ ಯೋಜನಾ ಪ್ರಾಧಿಕಾರದಲ್ಲಿ ಬಾಕಿ ಇದ್ದ 28 ಕಡತಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅನುಮೋದನೆ
ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 2,946 ಪಾಯಿಂಟ್ ಏರಿಕೆ, 24,000 ಗಡಿ ಸಮೀಪಿಸಿದ ನಿಫ್ಟಿ








