ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷಾ ಗ್ರೇಡಿಂಗ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಕೆಂಡಾಮಂಡಲವಾಗಿದ್ದಾರೆ. ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪಕ್ಕೆ ಇದೀಗ ಕನ್ನಡಪ್ರ ಸಂಘಟನೆಗಳು ಕಿಡಿಕಾರಿದ್ದು, ರಾಜ್ಯಪಾಲರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಡಿದೆದ್ದಿದೆ.
ಹಾಗಾಗಿ ಸೋಮವಾರ ಬೆಳಗ್ಗೆ 11 ಗಂಟೆಗೆ ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಹೌದು ಕರವೇ ನಾರಾಯಣಗೌಡ ಬಣದಿಂದ ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಈ ಒಂದು ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಕರವೇ ಕಾರ್ಯಕರ್ತರು ಆಗಮಿಸಲಿದ್ದಾರೆ. ಲೋಕಭವನ ಮುತ್ತಿಗೆ ಹಾಕಲು ಕರವೇ ನಾರಾಯಣಗೌಡ ಕರೆ ನೀಡಿದ್ದಾರೆ.
ಹಿಂದಿ ಸಾಮ್ರಾಜ್ಯಶಾಹಿಯ ಪರವಾಗಿ ಲಾಬಿ ಮಾಡುತ್ತಿದ್ದೀರಿ ಎಂದು ಆರೋಪಿಸಿರುವ ಅವರು, ಉತ್ತರ ಭಾರತದ ರಾಜ್ಯಗಳಲ್ಲಿ ಮೊದಲು ಕನ್ನಡವನ್ನು 3ನೇ ಭಾಷೆಯಾಗಿ ಜಾರಿಗೆ ತರುವ ಧೈರ್ಯ ತೋರಿಸಿ. ಅಧಿಕಪ್ರಸಂಗ ಮುಂದುವರಿಸಿದರೆ ಗಂಟುಮೂಟೆ ಕಟ್ಟಿ ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ಹೇಳಬೇಕಾಗುತ್ತದೆ ಎಂದು ಗುಡುಗಿದ್ದಾರೆ. ರಾಜಭವನದ ಐಷಾರಾಮಿ ವ್ಯವಸ್ಥೆ ಅನುಭವಿಸುತ್ತಾ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.








