ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಕದನವು ಕೇವಲ ಆ ಎರಡು ದೇಶಗಳಿಗಷ್ಟೇ ಹಾನಿ ಮಾಡಿಲ್ಲ. ಬದಲಾಗಿ, ಜಗತ್ತಿನ ಹತ್ತು-ಹಲವು ರಾಷ್ಟ್ರಗಳ ಅಭಿವೃದ್ಧಿಯ ವೇಗಕ್ಕೆ ಗಂಭೀರ ಬ್ರೇಕ್ ಹಾಕಿದೆ. “ಈ ಕದನ ಹೀಗೇ ಮುಂದುವರಿದರೆ ಜಗತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ 50 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಸಮುದಾಯಕ್ಕೆ ಮುನ್ನೆಚ್ಚರಿಕೆಯನ್ನೂ ನೀಡಿದ್ದರು.
2026ರ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ಈ ಯುದ್ಧ ಆರಂಭವಾಗಿತ್ತು. ವಿಶ್ವದ ಅತಿ ದೊಡ್ಡ ಆರ್ಥಿಕತೆ (ಅಮೆರಿಕ) ಮತ್ತು ಅತಿ ದೊಡ್ಡ ತೈಲ ಶಕ್ತಿ (ಇರಾನ್) ನಡುವೆ ನಡೆದ ಈ ಸುದೀರ್ಘ ಹೋರಾಟ ಕೊನೆಗೂ ಶಾಂತಿ ಒಪ್ಪಂದದೊಂದಿಗೆ ಮುಕ್ತಾಯಗೊಂಡಿದೆ. ಆದರೆ, ಈ ಮೂರೂವರೆ ತಿಂಗಳ ಅವಧಿಯಲ್ಲಿ ಸಂಭವಿಸಿದ ಹಾನಿ ಮಾತ್ರ ಕಲ್ಪನೆಗೂ ನಿಲುಕದಂತದ್ದಾಗಿದೆ.
ಮೊದಲ 15 ದಿನಗಳಲ್ಲೇ ಮರಣಮೃದಂಗ
ಯುದ್ಧ ಆರಂಭವಾದ ಮೊದಲ ಎರಡು ವಾರಗಳಲ್ಲಿಯೇ (2026ರ ಮಾರ್ಚ್ 15ರವರೆಗೆ) ಭೀಕರ ಸಾವು-ನೋವುಗಳು ಸಂಭವಿಸಿದ್ದವು. ಈ ಆರಂಭಿಕ ಹಂತದಲ್ಲೇ 390 ಸಾಮಾನ್ಯ ನಾಗರಿಕರು ಹಾಗೂ 3,910 ಸೈನಿಕರು ಮೃತಪಟ್ಟಿದ್ದರು.
ಶಾಲಾ ಮಕ್ಕಳ ಮೇಲಿನ ಅಮಾನವೀಯ ಬಾಂಬ್ ದಾಳಿ
ಈ ಯುದ್ಧದ ಅತ್ಯಂತ ಕರಾಳ ಮತ್ತು ಅಮಾನವೀಯ ಘಟನೆ ನಡೆದಿದ್ದು ಇರಾನ್‌ನ ಹಾರ್ಮುಜ್ ಪ್ರಾಂತ್ಯದಲ್ಲಿ. ಅಲ್ಲಿನ ‘ಶಜರೆಹ್ ತಯ್ಯೆಬೆಹ್’ ಬಾಲಕಿಯರ ಶಾಲೆಯ ಮೇಲೆ ಅಮೆರಿಕ ನಡೆಸಿದ ವೈಮಾನಿಕ ಬಾಂಬ್ ದಾಳಿಯಲ್ಲಿ ಅಂದಾಜು 175 ಮುಗ್ಧ ಶಾಲಾ ಬಾಲಕಿಯರು ಸಜೀವವಾಗಿ ಬಲಿಯಾಗಿದ್ದರು. ಈ ಘಟನೆ ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
107 ದಿನಗಳ ಮಹಾಯುದ್ಧ: ಸಾವು-ನೋವುಗಳ ಅಂಕಿ-ಅಂಶ
ಒಟ್ಟು 107 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಸಂಭವಿಸಿದ ಒಟ್ಟು ಹಾನಿಯ ಅಂದಾಜು ಪಟ್ಟಿ ಹೀಗಿದೆ:
-
ಇರಾನ್ ಸಿಬ್ಬಂದಿ: 5 ಸಾವಿರಕ್ಕೂ ಹೆಚ್ಚು ಇರಾನ್ ಸೈನಿಕರು ಮತ್ತು 1,508 ನಾಗರಿಕರು ಸಾವನ್ನಪ್ಪಿದ್ದಾರೆ. 22 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
-
ಸ್ಥಳಾಂತರ: ಯುದ್ಧದ ಭೀಕರತೆಗೆ ಹೆದರಿ ಇರಾನ್‌ನ ಸುಮಾರು 3.9 ಮಿಲಿಯನ್ (39 ಲಕ್ಷ) ಜನರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ಸ್ಥಳಾಂತರಗೊಂಡಿದ್ದಾರೆ.
-
ಪ್ರತಿದಾಳಿಯ ಹಾನಿ: ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಇಸ್ರೇಲ್‌ನ 15 ನಾಗರಿಕರು ಮೃತಪಟ್ಟು, 3,300 ಜನ ಗಾಯಗೊಂಡಿದ್ದಾರೆ. ಹಾಗೆಯೇ ಅಮೆರಿಕದ 13 ಸೈನಿಕರು ಮೃತಪಟ್ಟು, 200ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ.
ಜಾಗತಿಕ ಆರ್ಥಿಕತೆಗೆ ಬಿದ್ದ ಭಾರಿ ಪೆಟ್ಟು
ಈ ಯುದ್ಧದಲ್ಲಿ ಹಣದ ಅಪವ್ಯಯ ಮತ್ತು ಆರ್ಥಿಕ ನಷ್ಟ ಊಹಿಸಲೂ ಸಾಧ್ಯವಾಗದ ಮಟ್ಟ ತಲುಪಿದೆ:
-
ಈ ಯುದ್ಧಕ್ಕಾಗಿ ಅಮೆರಿಕ ಒಂದೇ ಬರೋಬ್ಬರಿ 1.12 ಟ್ರಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಿದೆ.
-
ಇರಾನ್-ಅಮೆರಿಕ ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಗೆ ವಾರ್ಷಿಕವಾಗಿ 2.2 ಟ್ರಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಒಂದು ವೇಳೆ ಈ ಯುದ್ಧ ಹೀಗೇ ಮುಂದುವರಿದಿದ್ದರೆ ಜಗತ್ತಿಗೆ ಬರೋಬ್ಬರಿ 3.5 ಟ್ರಿಲಿಯನ್ ಡಾಲರ್ ನಷ್ಟವಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಶತಕೋಟಿ ಡಾಲರ್ ಮೌಲ್ಯದ ಆಸ್ತಿಪಾಸ್ತಿಗಳು ಬೂದಿಯಾಗಿದ್ದು, ಜಾಗತಿಕ ಮಾರುಕಟ್ಟೆ ಹಣದುಬ್ಬರದಿಂದ (Inflation) ತತ್ತರಿಸಿಹೋಗಿದೆ.
‘ಎಂಜಿನ್ ಪ್ರಾರಂಭಿಸಿ, ತೈಲ ಹರಿಯಲಿ’
ಯುದ್ಧ ಮುಕ್ತಾಯಗೊಂಡು ಶಾಂತಿ ಒಪ್ಪಂದವಾಗುತ್ತಿದ್ದಂತೆಯೇ ಅಮೆರಿಕದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ, “ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್ ಪ್ರಾರಂಭಿಸಿ, ತೈಲ ಹರಿಯಲಿ” ಎಂದು ಪೋಸ್ಟ್ ಮಾಡುವ ಮೂಲಕ ಜಾಗತಿಕ ತೈಲ ಮಾರುಕಟ್ಟೆಗೆ ಚಾಲನೆ ನೀಡಿದ್ದಾರೆ. ಹೌದು, ಶಸ್ತ್ರಾಸ್ತ್ರಗಳು ಮತ್ತು ಯುದ್ಧಗಳು ಎಂದಿಗೂ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂಬುದನ್ನು ಸಾಬೀತುಪಡಿಸಲು ಈ ಮೂರೂವರೆ ತಿಂಗಳ ಕದನವೇ ಸಾಕಿತ್ತು.
ಜೂನ್ 19ರಂದು ಅಧಿಕೃತವಾಗಿ ನಡೆಯಲಿರುವ ಶಾಂತಿ ಒಪ್ಪಂದದ ಬಳಿಕ ಜಗತ್ತಿನಲ್ಲಿ ಮತ್ತದೇ ಭರವಸೆಗಳು ಮೂಡಬಹುದು, ವ್ಯಾಪಾರ-ವಹಿವಾಟುಗಳು ಹಳಿಗೆ ಮರಳಬಹುದು ಮತ್ತು ಎಲ್ಲವೂ ಸಹಜ ಸ್ಥಿತಿಗೆ ಬರಬಹುದು. ಆದರೆ, ಬಾಂಬ್ ಸ್ಫೋಟದ ಹೊಗೆಯ ನಡುವೆ ಹೂತುಹೋದ ಮುಗ್ಧ ಮಕ್ಕಳ ಶವಗಳು ಹಾಗೂ ಎಲ್ಲವನ್ನೂ ಕಳೆದುಕೊಂಡು ಛಿದ್ರವಾಗಿ ಹೋದ ಸಾವಿರಾರು ಕುಟುಂಬಗಳ ಒಡೆದ ಕನಸುಗಳು ಮಾತ್ರ ಇತಿಹಾಸದ ಪುಟಗಳಲ್ಲಿ ಹಾಗೇ ಉಳಿಯುತ್ತವೆ.
ವಿಜಯಪುರದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ
Lipstick Ban: ಮಕ್ಕಳನ್ನು ‘ಕ್ಯಾನ್ಸರ್’ನಿಂದ ರಕ್ಷಿಸಲು ಶಾಲೆಗಳಲ್ಲಿ ಲಿಪ್ ಸ್ಟಿಕ್ ನಿಷೇಧಿಸಿದ ಕೇರಳ








