ಶಿವಮೊಗ್ಗ: ನೂರಾರು ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಿನ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಯಲ್ಲಿ ಭೀಕರ ವಿಧ್ವಂಸಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಶಾಲೆಯ ಬೇಸಿಗೆ ರಜೆಯ ಅವಧಿಯನ್ನು ಬಳಸಿಕೊಂಡಿರುವ ಅಪರಿಚಿತ ಕಿಡಿಗೇಡಿಗಳು, ಶಾಲೆಯ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಶೌಚಾಲಯಕ್ಕೆ ನುಗ್ಗಿ ಅಲ್ಲಿನ ಪರಿಕರಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಘಟನೆಯ ವಿವರ:
ಬೇಸಿಗೆ ರಜೆಯ ನಂತರ ಇತ್ತೀಚೆಗಷ್ಟೇ ಶಾಲೆಗಳು ಪುನರಾರಂಭಗೊಂಡಿದ್ದವು. ಸಮವಸ್ತ್ರ ವಿತರಣೆಯ ಹಿನ್ನೆಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (SDMC) ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹೆಣ್ಣು ಮಕ್ಕಳು ಶೌಚಾಲಯದ ಬಳಿ ಹೋಗಲು ಹಿಂಜರಿಯುತ್ತಿದ್ದನ್ನು ಗಮನಿಸಿದ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರಿಗೆ ವಿಷಯ ತಿಳಿಸಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶೌಚಾಲಯದ ಒಳಗಿನ ಭೀಕರ ದೃಶ್ಯ ಕಂಡುಬಂದಿದೆ.

ಏನೇನು ಹಾನಿಯಾಗಿದೆ?
ಕಿಡಿಗೇಡಿಗಳು ಶೌಚಾಲಯದ ಒಳಗಿದ್ದ ಪ್ರತಿಯೊಂದು ವಸ್ತುವನ್ನು ವ್ಯವಸ್ಥಿತವಾಗಿ ಪುಡಿಪುಡಿ ಮಾಡಿದ್ದಾರೆ:
-
ಬೇಸನ್ಗಳು ಹಾಗೂ ನಲ್ಲಿಗಳು: ವಿದ್ಯಾರ್ಥಿಗಳ ಬಳಕೆಗೆ ಇದ್ದ ನಾಲ್ಕರಿಂದ ಐದು ಮೂತ್ರ ವಿಸರ್ಜನೆಯ (Urinal) ಬೇಸನ್ಗಳು ಹಾಗೂ ನೀರು ಸರಬರಾಜು ಮಾಡುವ ನಲ್ಲಿಗಳನ್ನು ಕಲ್ಲಿನಿಂದ ಹೊಡೆದು ಪುಡಿ ಮಾಡಲಾಗಿದೆ.
-
ಟಾಯ್ಲೆಟ್ ರೂಮ್ ಮತ್ತು ಗೋಡೆಗಳು: ಟಾಯ್ಲೆಟ್ ರೂಮ್ನ ಶೀಟ್ಗಳು, ಫಿಟ್ಟಿಂಗ್ಗಳು, ಕಿಟಕಿಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ಅಷ್ಟೇ ಅಲ್ಲದೆ ಫಿಟ್ ಮಾಡಲು ಅಳವಡಿಸಲಾಗಿದ್ದ ಚಪ್ಪಡಿ ಕಲ್ಲುಗಳನ್ನು ಜಖಂಗೊಳಿಸಲಾಗಿದೆ.
-
ನೀರಿನ ಸಂಪರ್ಕ ಕಡಿತ: ಶೌಚಾಲಯಕ್ಕೆ ಸಂಪರ್ಕ ಕಲ್ಪಿಸುವ ಪೈಪ್ಗಳನ್ನು ಒಡೆದು ಹಾಕಿ, ಶೌಚಾಲಯದ ಬಳಿಯಿದ್ದ ಬಾವಿಯ ಮೇಲಿನ ಮುಚ್ಚಳದ ಕಲ್ಲುಗಳನ್ನೂ ಸಹ ಧ್ವಂಸಗೊಳಿಸಲಾಗಿದೆ.
ಎಸ್ಡಿಎಂಸಿ ಅಧ್ಯಕ್ಷರ ಆಕ್ರೋಶ
ಈ ಕುರಿತು ಮಾತನಾಡಿದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹರೀಂದ್ರ ಕುಮಾರ್, “ರಜೆಯ ನಂತರ ನಾವು ಶಾಲೆಗೆ ಬಂದು ನೋಡಿದಾಗ ಈ ದೌರ್ಜನ್ಯ ಬೆಳಕಿಗೆ ಬಂದಿದೆ. ಶೌಚಾಲಯದ ಒಳಗಿನ ಕಮೋಡ್, ಯೂರಿನ್ ಬೇಸನ್, ನಲ್ಲಿ ಹಾಗೂ ಗೋಡೆಯ ಶೀಟ್ಗಳನ್ನು ಕಿಡಿಗೇಡಿಗಳು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಇದು ಅತ್ಯಂತ ಖಂಡನೀಯ ಕೃತ್ಯ. ಇಂತಹ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು” ಎಂದು ಒತ್ತಾಯಿಸಿದರು.

ಕಾನೂನು ಕ್ರಮಕ್ಕೆ ಕರವೇ ತಾಲೂಕು ಅಧ್ಯಕ್ಷರ ಆಗ್ರಹ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಕ್ಷಣಾ ನವ ಶಕ್ತಿ ವೇದಿಕೆಯ ತಾಲೂಕು ಅಧ್ಯಕ್ಷರಾದ ವಾಸಿಂ ಅವರು ಮಾತನಾಡಿ, “ಉಳ್ಳೂರು ಪ್ರೌಢಶಾಲೆಗೆ ನೂರಾರು ವರ್ಷಗಳ ಇತಿಹಾಸವಿದೆ. ನಮ್ಮ ಊರಿನ ಇತಿಹಾಸದಲ್ಲೇ ಇಂತಹ ನೀಚ ಕೃತ್ಯವನ್ನು ನಾವು ಎಂದೂ ಕಂಡಿಲ್ಲ. ಯಾರೋ ಹೊಟ್ಟೆಕಿಚ್ಚಿನಿಂದ ಇಡೀ ಶಾಲೆಯ ಶೌಚಾಲಯವನ್ನು ಹಾಳುಮಾಡಿದ್ದಾರೆ ಎಂಬುದಾಗಿ ಆಕ್ರೋಶ ಹೊರ ಹಾಕಿದರು.

ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿ ಕನಿಷ್ಠ 2 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟುಮಾಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಮಾಡುವುದು ಅಪರಾಧ. ಈ ಬಗ್ಗೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಮತ್ತು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ. ಅಲ್ಲದೇ ಈ ಕಿಡಿಗೇಡಿ ತನವನ್ನು ಪ್ರದರ್ಶಿಸಿ, ಶಾಲೆಯ ಮೂಲ ಸೌಕರ್ಯದಂತ ವಸ್ತುಗಳನ್ನು ಹಾನಿ ಮಾಡಿದಂತ ಕಿಡಿಗೇಡಿಗಳನ್ನು ಬಂಧಿಸುವಂತೆಯೂ ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ನವ ಶಕ್ತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಾಸಿಂ ಒತ್ತಾಯಿಸಿದರು.
ಉಳ್ಳೂರು ಸರ್ಕಾರಿ ಪ್ರೌಢ ಶಾಲೆಯ ಎಸ್ ಡಿ ಎಂಸಿ ಸದಸ್ಯರಾದಂತ ಭಾಸ್ಕರ, ಗಣಪತಿ, ಶಿವಕುಮಾರ್, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಗರದಲ್ಲಿ ಮಳೆಗಾಲದ ಅವಘಡ ಎದುರಿಸಲು ಸನ್ನದ್ಧರಾಗಿ: ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ
Lipstick Ban: ಮಕ್ಕಳನ್ನು ‘ಕ್ಯಾನ್ಸರ್’ನಿಂದ ರಕ್ಷಿಸಲು ಶಾಲೆಗಳಲ್ಲಿ ಲಿಪ್ ಸ್ಟಿಕ್ ನಿಷೇಧಿಸಿದ ಕೇರಳ









