ಮುಂಬೈ:ಜಾಗತಿಕ ರಾಜಕೀಯ ಉದ್ವಿಗ್ನತೆಯ ನೇರ ಪರಿಣಾಮ ಇಂದು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಬಿದ್ದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಗುರುವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಸಂವೇದಿ ಸೂಚ್ಯಂಕಗಳು ಪಾತಾಳಕ್ಕೆ ಕುಸಿದಿವೆ.
ಬಿಎಸ್ಇ (BSE) ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲೇ 1,474 ಪಾಯಿಂಟ್ ಕುಸಿತ ಕಂಡು 73,000 ಮಟ್ಟಕ್ಕೆ ಜಾರಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ಕಂಡ ಅತಿದೊಡ್ಡ ಏಕದಿನ ಕುಸಿತಗಳಲ್ಲಿ ಒಂದಾಗಿದೆ.
ನಿಫ್ಟಿ ತತ್ತರ: ಎನ್ಎಸ್ಇ (NSE) ನಿಫ್ಟಿ ಸುಮಾರು 450 ಪಾಯಿಂಟ್ ಕುಸಿತ ಕಂಡು 22,250 ರ ನಿರ್ಣಾಯಕ ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ. ಇದು ತಾಂತ್ರಿಕವಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಕುಸಿತದ ಮುನ್ಸೂಚನೆ ನೀಡಿದೆ.
ಮಾರುಕಟ್ಟೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ ಸುಮಾರು 5 ಲಕ್ಷ ಕೋಟಿ ರೂಪಾಯಿ ಸಂಪತ್ತು ಮಣ್ಣುಪಾಲಾಗಿದೆ.
ತೈಲ ಮತ್ತು ಗ್ಯಾಸ್ ಷೇರುಗಳ ಕುಸಿತ: ಜಾಗತಿಕ ತೈಲ ಬೆಲೆ ಏರಿಕೆಯ ಭೀತಿಯಿಂದಾಗಿ ತೈಲ ಕಂಪನಿಗಳು, ಬ್ಯಾಂಕಿಂಗ್ ಮತ್ತು ಐಟಿ ವಲಯದ ಷೇರುಗಳು ಭಾರಿ ನಷ್ಟ ಅನುಭವಿಸಿವೆ.








