ಬಳ್ಳಾರಿ: ನಗರದ ಹೊರವಲಯದ ಅಂದ್ರಾಳ ಹಳ್ಳದಲ್ಲಿ ಮಹಿಳೆಯೊಬ್ಬರ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮೃತರನ್ನು ಕೌಲ್ ಬಜಾರ್ ನಿವಾಸಿ, 38 ವರ್ಷದ ಅನಿಷ ಫಾತಿಮಾ ಎಂದು ಗುರುತಿಸಲಾಗಿದೆ. ಹಳ್ಳದ ಪಕ್ಕದಲ್ಲಿರುವ ಜಾಲಿ ಬೇಲಿಯ ಪೊದೆಯೊಂದರಲ್ಲಿ ಇವರ ಶವ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮೃತ ಅನಿಷ ಫಾತಿಮಾ ಅವರು ಸ್ಥಳೀಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ (ಕರ್ನಾಟಕ ಗ್ರಾಮೀಣ ಬ್ಯಾಂಕ್) ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಪ್ರತಿದಿನದಂತೆ ಕೆಲಸ ಮುಗಿಸಿಕೊಂಡು ಹೋಗಿದ್ದ ಮಹಿಳೆ, ಮರುದಿನವೇ ಈ ರೀತಿ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರನ್ನು ಹಾಗೂ ಸಹೋದ್ಯೋಗಿಗಳನ್ನು ತೀವ್ರ ಆಘಾತಕ್ಕೆ ದೂಡಿದೆ.
ಪಾರ್ಟಿಗೆ ಹೋಗಿದ್ದ ಮಹಿಳೆ: ಲಭ್ಯವಿರುವ ಮಾಹಿತಿ ಪ್ರಕಾರ, ಮೃತ ಅನಿಷ ಫಾತಿಮಾ ಅವರು ನಿನ್ನೆ ರಾತ್ರಿ ತಮ್ಮ ಬ್ಯಾಂಕ್ ಸಿಬ್ಬಂದಿಗಳ ಜೊತೆಗೆ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಪಾರ್ಟಿ ಮುಗಿದ ನಂತರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಅನಿಷಾ ತಮ್ಮ ಪತಿಗೆ ಫೋನ್ ಕರೆ ಮಾಡಿ ಮಾತನಾಡಿದ್ದರು. ಆದರೆ, ಆ ಕರೆಯೇ ಅವರ ಕೊನೆಯ ಕರೆಯಾಗಿದ್ದು, ತದನಂತರ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು. ಕುಟುಂಬದವರು ಎಷ್ಟೇ ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ – ಹೆಚ್ಚಿದ ಅನುಮಾನ: ಇಂದು ಬೆಳಗ್ಗೆ ಅಂದ್ರಾಳ ಹಳ್ಳದ ಜಾಲಿ ಬೇಲಿಯಲ್ಲಿ ಅನಿಷಾ ಅವರ ಮೃತದೇಹ ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ಬಟ್ಟೆಗಳಿಲ್ಲದೆ ಶವ ಸಿಕ್ಕಿರುವುದರಿಂದ ಇದು ಸಾಮಾನ್ಯ ಸಾವಲ್ಲ, ಇದರ ಹಿಂದೆ ದೊಡ್ಡ ಸಂಚು ಅಡಗಿದೆ ಎಂಬ ಅನುಮಾನಗಳು ಬಲವಾಗಿ ವ್ಯಕ್ತವಾಗುತ್ತಿವೆ. ದುಷ್ಕರ್ಮಿಗಳು ಆಕೆಯ ಮೇಲೆ ದೌರ್ಜನ್ಯ ಎಸಗಿ, ನಂತರ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಇಲ್ಲಿ ತಂದು ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರ ಭೇಟಿ: ಘಟನಾ ಸ್ಥಳಕ್ಕೆ ಬಳ್ಳಾರಿ ಎಪಿಎಂಸಿ ಠಾಣೆಯ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಆಗಮಿಸಿ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ರಾತ್ರಿ ಪತ್ನಿ ಕರೆ ಮಾಡಿದ ನಂತರ ಏನಾಯಿತು? ಪಾರ್ಟಿಯಲ್ಲಿ ಯಾರ್ಯಾರು ಭಾಗವಹಿಸಿದ್ದರು? ಕೊನೆಯದಾಗಿ ಆಕೆ ಯಾರ ಜೊತೆ ತೆರಳಿದ್ದರು? ಎಂಬ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರವಷ್ಟೇ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.








