ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಕೂಗಳತೆ ದೂರದಲ್ಲೇ ಮಾಟ-ಮಂತ್ರದಂತಹ ವಾಮಾಚಾರ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸದಾಶಿವನಗರದ ಜಿಬಿಎ (GBA) ಮೈದಾನದ ಮುಂಭಾಗದ ರಸ್ತೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಗಳ ನಿವಾಸದ ಹಿಂಭಾಗದ ರಸ್ತೆಯೂ ಆಗಿರುವ ಈ ಸ್ಥಳದಲ್ಲಿ ಕಿಡಿಗೇಡಿಗಳು ತಡರಾತ್ರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಜನರಲ್ಲಿ ಮೂಡಿದ ಭೀತಿ
ರಸ್ತೆಯ ಮೇಲೆ ವೃತ್ತಾಕಾರ (ರಂಗೋಲಿ/ಗೇರೆ) ಹಾಕಿ, ಕೋಳಿಯನ್ನು ಕೊಯ್ದು, ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ಮಾಡಲಾಗಿದೆ. ಅತ್ಯಂತ ಸುರಕ್ಷಿತ ಹಾಗೂ ಗಣ್ಯರು ವಾಸಿಸುವ ಪ್ರದೇಶದಲ್ಲೇ ಇಂತಹ ಸಾರ್ವಜನಿಕ ರಸ್ತೆಯಲ್ಲಿ ಮಾಟ-ಮಂತ್ರದ ಕುರುಹುಗಳು ಪತ್ತೆಯಾಗಿರುವುದು ಮಕ್ಕಳಲ್ಲಿ ಮತ್ತು ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ. ಸದ್ಯ ಜಿಬಿಎ ಮೈದಾನದ ಈ ರಸ್ತೆಯಲ್ಲಿ ಓಡಾಡುವುದಕ್ಕೆ ಸಾರ್ವಜನಿಕರು ಹಾಗೂ ಪಾದಚಾರಿಗಳು ತೀವ್ರ ಹಿಂದೇಟು ಹಾಕುತ್ತಿದ್ದಾರೆ.
ಪೊಲೀಸರ ಭೇಟಿ, ಪರಿಶೀಲನೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸದಾಶಿವನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಾಮಾಚಾರ ಮಾಡಲಾಗಿದ್ದ ಸ್ಥಳದಲ್ಲಿದ್ದ ಕೋಳಿ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ಅಲ್ಲಿಂದ ತೆರವುಗೊಳಿಸಿದ್ದಾರೆ. ಹತ್ತಿರದಲ್ಲೇ ಮುಖ್ಯಮಂತ್ರಿಗಳ ನಿವಾಸವಿರುವುದರಿಂದ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಇರುತ್ತದೆ. ಆದಾಗ್ಯೂ ಇಂತಹ ಕೃತ್ಯ ನಡೆದಿರುವುದು ಹೇಗೆ ಎಂಬ ಪ್ರಶ್ನೆ ಮೂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.








