ಚಂಡೀಗಢ:ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿ ಚಂಡೀಗಢದ ಸೆಕ್ಟರ್ 37ರಲ್ಲಿರುವ ಪಂಜಾಬ್ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಬುಧವಾರ (ಏಪ್ರಿಲ್ 1, 2026) ಸಂಜೆ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ. ಈ ಘಟನೆಯಿಂದಾಗಿ ಇಡೀ ಪ್ರದೇಶದಲ್ಲಿ ಆತಂಕ ಮನೆಮಾಡಿದ್ದು, ಭದ್ರತಾ ಪಡೆಗಳು ಹೈ ಅಲರ್ಟ್ ಘೋಷಿಸಿವೆ.
ಬಿಜೆಪಿ ರಾಜ್ಯ ಘಟಕದ ಕಚೇರಿಯ ಹೊರಗೆ ಸಂಜೆ ಸುಮಾರು 5 ಗಂಟೆಗೆ ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿಸಿತು ಎಂದು ಬಿಜೆಪಿ ನಾಯಕ ವಿನೀತ್ ಜೋಶಿ ತಿಳಿಸಿದ್ದಾರೆ.ಪ್ರಾಥಮಿಕ ವರದಿಗಳ ಪ್ರಕಾರ, ಈ ಸ್ಫೋಟದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಆದರೆ, ಕಚೇರಿಯ ಸಮೀಪ ನಿಲ್ಲಿಸಲಾಗಿದ್ದ ಕೆಲವು ವಾಹನಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.
ಸ್ಫೋಟದ ತೀವ್ರತೆ ಕಡಿಮೆಯಿದ್ದು, ಇದು ಯಾವುದಾದರೂ ವಾಹನ ಅಥವಾ ಉಪಕರಣದ ಬ್ಯಾಟರಿ ಸ್ಫೋಟಗೊಂಡಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿದೆ. ಆದರೂ, ವಿಧ್ವಂಸಕ ಕೃತ್ಯದ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ. ಚಂಡೀಗಢ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಿಎಫ್‌ಎಸ್‌ಎಲ್ (CFSL) ವಿಧಿವಿಜ್ಞಾನ ತಂಡವು ಸ್ಫೋಟದ ಮಾದರಿಯನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದೆ.
ಘಟನೆಯ ಬೆನ್ನಲ್ಲೇ ಬಿಜೆಪಿ ಕಚೇರಿಯ ಸುತ್ತಮುತ್ತಲಿನ ಪ್ರದೇಶವನ್ನು ಪೊಲೀಸರು ಸೀಲ್ ಮಾಡಿದ್ದು, ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.








