ಧಾರವಾಡ: ನಗರದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ತರಸಿನಕೊಪ್ಪ ಏರಿಯಾದಲ್ಲಿ (ಟ್ರಿಪಲ್ ಐಟಿ ಹತ್ತಿರ) ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಭೀಕರ ಸಂಘರ್ಷ ಏರ್ಪಟ್ಟಿದ್ದು, ಏಕಾಏಕಿ ಗುಂಡಿನ ದಾಳಿ ನಡೆಸಿರುವ ಗಂಭೀರ ಘಟನೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎನ್.ಶಶಿಕುಮಾರ ತಿಳಿಸಿದ್ದಾರೆ.
ಘಟನೆಯ ವಿವರ:
ಮೇ 26ರಂದು ಮಧ್ಯಾಹ್ನ ಸುಮಾರು 12:30ರ ವೇಳೆಗೆ ಈ ಘಟನೆ ನಡೆದಿದೆ. “ನಾವು ಜಮೀನು ಖರೀದಿ ಮಾಡಿದ್ದೇವೆ, ಇದನ್ನು ಅಭಿವೃದ್ಧಿಪಡಿಸುತ್ತೇವೆ” ಎಂದು ಹೇಳಿಕೊಂಡು ಒಂದು ಗುಂಪು ಸ್ಥಳಕ್ಕೆ ತೆರಳಿತ್ತು. ಈ ವೇಳೆ ಆ ಜಮೀನಿನ ಸ್ವಾಧೀನದಲ್ಲಿದ್ದ (పೊಸೆಷನ್) ಕುಟುಂಬಸ್ಥರು ಮತ್ತು ಅವರ ಸಂಬಂಧಿಕರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆ ವೇಳೆ ಸ್ಥಳಕ್ಕೆ ಬಂದಿದ್ದ ವ್ಯಕ್ತಿಗಳು ತಮಗಿದ್ದ ಪಿಸ್ತೂಲ್ ಮತ್ತು ರಿವಾಲ್ವರ್ ಬಳಸಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಯುವಕನಿಗೆ ಗಂಭೀರ ಗಾಯ:
ಈ ಗುಂಡಿನ ಚಕಮಕಿಯಲ್ಲಿ ಸ್ಥಳೀಯ ಕುಟುಂಬಕ್ಕೆ ಸೇರಿದ ವಿಟ್ಟಲ್ ಎಂಬ ಯುವಕನ ಕಾಲಿಗೆ ಬುಲೆಟ್ ತಗುಲಿ ಗಂಭೀರ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (Attempt to Murder), ಶಸ್ತ್ರಾಸ್ತ್ರ ಕಾಯ್ದೆ (Arms Act) ಹಾಗೂ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸಾಕ್ಷ್ಯ ಹಾಗೂ ಆರೋಪಿಗಳ ಬಂಧನ:
ಆರಂಭದಲ್ಲಿ ಅಂಗರಕ್ಷಕರು (ಬಾಡಿಗಾರ್ಡ್ಸ್) ಫೈರಿಂಗ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಲಭ್ಯವಾದ ವಿಡಿಯೋ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಪ್ರಮುಖ ಆರೋಪಿಗಳಾದ ಪ್ರವೀಣ್ ಸುತ್ತಾರ್ ಮತ್ತು ಸುಂದರ್ ಪೌಲ್ ಎಂಬುವವರು ನೇರವಾಗಿ ವೆಪನ್ ಬಳಸಿ ಫೈರ್ ಮಾಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.
ಬಂಧಿತ ಐವರು ಆರೋಪಿಗಳ ವಿವರ ಹೀಗಿದೆ:
- ಪ್ರವೀಣ್ ಸುತ್ತಾರ್ (A1): ಈತ ತನ್ನದೇ ಸ್ವಂತ ವೆಪನ್ನಿಂದ ಶೂಟ್ ಮಾಡಿದ್ದು, ಈತನನ್ನು ವಶಕ್ಕೆ ಪಡೆದು ವೆಪನ್ ಸೀಜ್ ಮಾಡಲಾಗಿದೆ.
- ಸುಂದರ್ ಪೌಲ್: ಈತ ತನ್ನ ಅಂಗರಕ್ಷಕ ಇಂದರ್ಪಾಲ್ ಸಿಂಗ್ ಬಳಿಯಿದ್ದ ವೆಪನ್ ಅನ್ನು ಬಲವಂತವಾಗಿ ಕಿತ್ತುಕೊಂಡು ಫೈರ್ ಮಾಡಿದ್ದಾನೆ.
- ಫಿಲೋಮಿನ: ಸುಂದರ್ ಪೌಲ್ ತಂದೆಯಾಗಿದ್ದು, ಇವರು ಘಟನೆ ನಡೆಯುವಾಗ ಫೋನ್ ಮೂಲಕ ನಿರಂತರವಾಗಿ ಗೈಡ್ ಮಾಡುತ್ತಿದ್ದರು ಮತ್ತು ಈ ಹಿಂದೆ ಸ್ಥಳಕ್ಕೆ ಬಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
- ಇಂದರ್ಪಾಲ್ ಸಿಂಗ್: ಸುಂದರ್ ಪೌಲ್ನ ಅಂಗರಕ್ಷಕ (ಈತನ ವೆಪನ್ನಿಂದಲೇ ಸುಂದರ್ ಪೌಲ್ ಶೂಟ್ ಮಾಡಿದ್ದ).
- ಬೆಂಜಮಿನ್ ಮತ್ತು ವಿಶಾಲ್: ಕೃತ್ಯದಲ್ಲಿ ಭಾಗಿಯಾದ ಇತರ ಇಬ್ಬರು ಆರೋಪಿಗಳು.
ಪೊಲೀಸ್ ಕಾರ್ಯಾಚರಣೆ:
ಬಂಧಿತ ಆರೋಪಿಗಳನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಘಟನಾ ಸ್ಥಳದಿಂದ ಪೊಲೀಸರು ಸದ್ಯ ಒಂದು ಪಿಸ್ತೂಲ್, ಒಂದು ರಿವಾಲ್ವರ್ ಮತ್ತು ಒಂದು ಫಾರ್ಚುನರ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು 5 ಪ್ರತ್ಯೇಕ ತಂಡಗಳನ್ನು ರಚಿಸಿ ಸಮಗ್ರ ತನಿಖೆ ಮುಂದುವರೆದಿದೆ.








