ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವ ಪ್ರಸ್ತಾವನೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಷರತ್ತುಬದ್ಧ ಅನುಮೋದನೆ ನೀಡಿ ಕಡತ ಹಿಂತಿರುಗಿಸಿದ್ದಾರೆ. ಹಾಲಿ ಸದಸ್ಯರ ಅವಧಿ ಮುಕ್ತಾಯವಾದ ನಂತರ ಹಾಗೂ ಜನಗಣತಿ ಪ್ರಕ್ರಿಯೆ ಮುಗಿದ ನಂತರವಷ್ಟೇ ವಿಭಜನೆ ಜಾರಿಯಾಗಬೇಕು ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಬೆಂಗಳೂರು ಬಿಟ್ಟರೆ ರಾಜ್ಯದಲ್ಲೇ ಅತ್ಯಂತ ದೊಡ್ಡದಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡವನ್ನು ಪ್ರತ್ಯೇಕಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಹುಬ್ಬಳ್ಳಿಗೇ ಹೆಚ್ಚಿನ ಅನುದಾನ ಸಿಗುತ್ತಿದೆ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಿಸಿದ್ದರು. ಆದರೆ ಈಗ ಈ ಪ್ರಕ್ರಿಯೆಗೆ ಕಾನೂನು ಮತ್ತು ತಾಂತ್ರಿಕ ಒಳಸುಳಿಗಳು ಎದುರಾಗಿವೆ.
ಪ್ರಸ್ತುತ ಇರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ 5 ವರ್ಷಗಳ ಅಧಿಕಾರ ಅವಧಿ ಪೂರ್ಣಗೊಂಡ ನಂತರವೇ ವಿಭಜನೆ ಜಾರಿಗೆ ಬರಬೇಕು.2026ರ ಜನವರಿ 1ರಿಂದ 2027ರ ಮಾರ್ಚ್ 31ರವರೆಗೆ ಯಾವುದೇ ಆಡಳಿತಾತ್ಮಕ ಘಟಕಗಳ ಗಡಿ ಬದಲಾಯಿಸಬಾರದು ಎಂದು ಜನಗಣತಿ ನಿರ್ದೇಶನಾಲಯ ಸೂಚಿಸಿದೆ. ಹಾಗಾಗಿ, ರಾಷ್ಟ್ರೀಯ ಜನಗಣತಿ ಪ್ರಕ್ರಿಯೆ ಮುಗಿಯುವವರೆಗೆ ಈ ವಿಭಜನೆಯ ಅಧಿಸೂಚನೆ ಜಾರಿ ಮಾಡುವಂತಿಲ್ಲ. ವಿಭಜನೆಯ ನಂತರ ಎರಡೂ ಪಾಲಿಕೆಗಳಿಗೆ ಆರ್ಥಿಕ ನಷ್ಟವಾಗದಂತೆ ಆದಾಯ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಕಡತವನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.








