ನವದೆಹಲಿ:ಭಾರತದ ರಕ್ಷಣಾ ಸಚಿವಾಲಯವು ದೇಶದ ವಾಯು ರಕ್ಷಣಾ ಕವಚವನ್ನು ಮತ್ತಷ್ಟು ಭದ್ರಪಡಿಸಲು ಬೃಹತ್ ನಿರ್ಧಾರ ಕೈಗೊಂಡಿದೆ. ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯಲ್ಲಿ ರಷ್ಯಾದ S-400 ಕ್ಷಿಪಣಿ ವ್ಯವಸ್ಥೆಯು ತೋರಿದ ಅಮೋಘ ಯಶಸ್ಸಿನ ಬೆನ್ನಲ್ಲೇ, ಭಾರತ ಸರ್ಕಾರವು ಮತ್ತೆ 5 ಹೊಸ S-400 ಸ್ಕ್ವಾಡ್ರನ್‌ಗಳು ಹಾಗೂ ಸುಖೋಯ್ ಯುದ್ಧ ವಿಮಾನಗಳ ಇಂಜಿನ್ ನವೀಕರಣಕ್ಕೆ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (DAC) ಒಟ್ಟು 2.38 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಖರೀದಿಗಳಿಗೆ ಚಾಲನೆ ನೀಡಿದೆ. ಇದರಲ್ಲಿ ಹೆಚ್ಚುವರಿ 5 S-400 ಘಟಕಗಳ ಖರೀದಿ ಪ್ರಮುಖವಾಗಿದೆ. 2025ರ ಮೇ ತಿಂಗಳಲ್ಲಿ ನಡೆದ ವೈಮಾನಿಕ ಸಂಘರ್ಷದ ವೇಳೆ (ಆಪರೇಷನ್ ಸಿಂಧೂರ್), S-400 ವ್ಯವಸ್ಥೆಯು ಶತ್ರು ರಾಷ್ಟ್ರದ ಡ್ರೋನ್ ಮತ್ತು ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿತ್ತು. ಈ ಅನುಭವದ ಆಧಾರದ ಮೇಲೆ ಭಾರತವು ತನ್ನ ವಾಯು ರಕ್ಷಣೆಯನ್ನು ಇನ್ನಷ್ಟು ವಿಸ್ತರಿಸುತ್ತಿದೆ.
ಭಾರತೀಯ ವಾಯುಪಡೆಯ ಬೆನ್ನೆಲುಬಾಗಿರುವ ಸುಖೋಯ್-30 (Su-30 MKI) ಯುದ್ಧ ವಿಮಾನಗಳ ಇಂಜಿನ್‌ಗಳ ಓವರ್‌ಹಾಲ್ (Overhaul) ಮತ್ತು ಆಧುನೀಕರಣಕ್ಕೂ ಈ ಯೋಜನೆಯಲ್ಲಿ ಒತ್ತು ನೀಡಲಾಗಿದೆ.ಈಗಾಗಲೇ ಮಾಡಿಕೊಂಡಿರುವ ಹಳೆಯ ಒಪ್ಪಂದದ ಪ್ರಕಾರ ಬಾಕಿ ಉಳಿದಿರುವ ಎರಡು S-400 ಘಟಕಗಳು ಈ ವರ್ಷದ ನವೆಂಬರ್ ಒಳಗೆ ಭಾರತಕ್ಕೆ ತಲುಪಲಿವೆ. ಇದರ ಬೆನ್ನಲ್ಲೇ ಹೊಸದಾಗಿ ಆರ್ಡರ್ ಮಾಡಲಾದ ಘಟಕಗಳ ಪ್ರಕ್ರಿಯೆ ಆರಂಭವಾಗಲಿದೆ.
ಹೆಚ್ಚುವರಿ 288 ಕ್ಷಿಪಣಿಗಳ ಖರೀದಿಗೆ ಸಹ ಅನುಮೋದನೆ ನೀಡಲಾಗಿದ್ದು, ಇದು ಸುಮಾರು 400 ಕಿ.ಮೀ ದೂರದವರೆಗಿನ ವೈಮಾನಿಕ ಗುರಿಗಳನ್ನು ನಿಖರವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.








