ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾತ್ಮಕ ನೀತಿಗಳು ಮತ್ತು ಇರಾನ್ ವಿರುದ್ಧದ ಯುದ್ಧ ಘೋಷಣೆಯನ್ನು ವಿರೋಧಿಸಿ ವಿಶ್ವದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ‘ನೋ ಕಿಂಗ್ಸ್’ (ನಮಗೆ ರಾಜರು ಬೇಡ) ಎಂಬ ಘೋಷಣೆಯಡಿ ಅಮೆರಿಕದ ಎಲ್ಲಾ 50 ರಾಜ್ಯಗಳು ಮತ್ತು ಯುರೋಪ್‌ನ ಪ್ರಮುಖ ನಗರಗಳಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಏಕದಿನ ಪ್ರತಿಭಟನೆ ಎನ್ನಲಾದ ಈ ಆಂದೋಲನದಲ್ಲಿ ಅಂದಾಜು 80 ರಿಂದ 90 ಲಕ್ಷ ಜನರು ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ. ಇರಾನ್ ಮೇಲಿನ ಸರಣಿ ವೈಮಾನಿಕ ದಾಳಿಗಳನ್ನು ಖಂಡಿಸಿದ ಪ್ರತಿಭಟನಾಕಾರರು, “ನಮಗೆ ಯುದ್ಧ ಬೇಡ, ಶಾಂತಿ ಬೇಕು” ಮತ್ತು “ಪ್ರಜಾಪ್ರಭುತ್ವದಲ್ಲಿ ರಾಜರಿಗೆ ಜಾಗವಿಲ್ಲ” ಎಂಬ ಫಲಕಗಳನ್ನು ಪ್ರದರ್ಶಿಸಿದರು.
ಅಮೆರಿಕದ ವಾಷಿಂಗ್ಟನ್ ಡಿ.ಸಿ, ನ್ಯೂಯಾರ್ಕ್, ಚಿಕಾಗೋ ಸೇರಿದಂತೆ ಯುರೋಪ್‌ನ ಲಂಡನ್, ಪ್ಯಾರಿಸ್ ಮತ್ತು ರೋಮ್ ನಗರಗಳಲ್ಲಿ ಬೃಹತ್ ರ‍್ಯಾಲಿಗಳು ನಡೆದಿವೆ.ಮಿನ್ನೇಸೋಟದಲ್ಲಿ ನಡೆದ ಪ್ರಮುಖ ರ‍್ಯಾಲಿಯಲ್ಲಿ ಖ್ಯಾತ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಭಾಗವಹಿಸಿ, ಟ್ರಂಪ್ ಅವರ ಕಠಿಣ ವಲಸೆ ನೀತಿಗಳ ವಿರುದ್ಧ ಹಾಡಿನ ಮೂಲಕ ಧ್ವನಿ ಎತ್ತಿದರು.
ಬಹುತೇಕ ಕಡೆ ಪ್ರತಿಭಟನೆ ಶಾಂತಿಯುತವಾಗಿತ್ತಾದರೂ, ಲಾಸ್ ಏಂಜಲೀಸ್‌ನಂತಹ ಕೆಲವು ನಗರಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಘಟನೆಗಳು ನಡೆದಿವೆ.








