ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಹೆಸರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಅಥವಾ ಬೇರೆ ಕಡೆ ಸ್ಮಾರಕ ನಿರ್ಮಿಸಬೇಕು ಎಂಬ ಸಲಹೆಯನ್ನು ಕುಟುಂಬದವರು ನೀಡಿದ್ದು, ಆದನ್ನು ಸ್ವೀಕರಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ವಿಧಾನಸಭೆಗೆ ತಿಳಿಸಿದರು.
ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರ ಗಮನ ಸಳೆಯುವ ಸೂಚನೆಗೆ ಉತ್ತರಿಸಿದ ಅವರು, ಕರ್ತವ್ಯಕ್ಕೆ ಸೇರಿ ಕೆಲವೇ ದಿನಗಳಲ್ಲಿ ಈ ದುರ್ಘಟನೆ ನಡೆದಿದೆ. ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಆ ವೇಳೆ 30 ಲಕ್ಷ ರೂಪಾಯಿ ಪರಿಹಾರ ಕೊಡಲು ಸರ್ಕಾರ ಮುಂದಾಗಿತ್ತು. ಆದರೆ ಕುಟುಂಬಸ್ಥರು ಪರಿಹಾರ ಬೇಡ, ಬನ್ನೇರುಘಟ್ಟ ಅಥವಾ ಬೇರೆ ಮೃಗಾಲಯದಲ್ಲಿ ಸ್ಮಾರಕ ಮಾಡಿ ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಸ್ಮಾರಕ ರೂಪಿಸಲು ಸರ್ಕಾರ ಚಿಂತಿಸಲಿದೆ ಎಂದರು.
ಯುವ ವೈದ್ಯೆ ಉತ್ಸಾಹಿ ಆಗಿದ್ದರು. ಮೃಗಾಲಯದಲ್ಲಿ ಈ ಹಿಂದೆ ಚಿರತೆಯೊಂದಕ್ಕೆ ಚಿಕಿತ್ಸೆ ನೀಡಿ ಸಂರಕ್ಷಣೆ ಮಾಡಿದ್ದರು. ಘಟನೆ ನಡೆದ ರಾತ್ರಿ ಪಕ್ಷಿಯೊಂದಕ್ಕೆ ಆ್ಯಂಟಿ ಬಯೋಟಿಕ್ಸ್ ನೀಡಲು ಕರ್ತವ್ಯ ನಿರತರಾಗಿ ಹೋಗಿದ್ದರು, ಇಬ್ಬರು ಸಹೋದ್ಯೋಗಿಗಳೂ ಇದ್ದರು. ಪಕ್ಷಿಗೆ ಚಿಕಿತ್ಸೆ ಕೊಟ್ಟ ಬಳಿಕ ಪ್ರತ್ಯೇಕ ಆವರಣದಲ್ಲಿದ್ದ ನೀರಾನೆಯ ಆರೋಗ್ಯ ನೋಡಬೇಕು ಎಂದು ಹೋದಾಗ ಈ ದುರ್ಘಟನೆ ನಡೆದಿದೆ. ವೈದ್ಯೆ ವಿರುದ್ಧ ನಮ್ಮ ಅಧಿಕಾರಿಗಳು ಯಾರಾದರೂ ತಪ್ಪು ಹೇಳಿಕೆ ನೀಡಿದ್ದರೆ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವರು ಸ್ಪಷ್ಟಪಡಿಸಿದರು.








