ನವದೆಹಲಿ: ಮೊಬೈಲ್‌ಫೋನ್‌ನಲ್ಲಿ ಚಿತ್ರೀಕರಿಸಿದ ವೀಡಿಯೊಗಳನ್ನು ಜನರು ಅಥವಾ ಪೊಲೀಸರು ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವ ಪ್ರವೃತ್ತಿ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇಂಥ ಚಟುವಟಿಕೆಗಳು ನ್ಯಾಯಯುತ ವಿಚಾರಣೆಗೆ ಗಂಭೀರ ಬೆದರಿಕೆ ಉಂಟುಮಾಡುತ್ತವೆ ಎಂದು ಹೇಳಿದೆ.
ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಗಳ ವಿಡಿಯೋ-ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಜನರ ಮನಸ್ಸಿನಲ್ಲಿ ಕೆಟ್ಟ ಭಾವನೆಗಳನ್ನು ಸೃಷ್ಟಿಸಿದಂತಾಗುತ್ತದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಯಲ್ಯ ಬಾಗಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರ ಪೀಠ ನಡೆಸಿತು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಹೊಂದಿರುವ ಪ್ರತಿ ವ್ಯಕ್ತಿ ಮಾಧ್ಯಮದವರಾಗಿದ್ದಾರೆ. ಆರೋಪಿಗಳಿಗೆ ಕೈಕೋಳ ತೊಡಿಸುವುದು, ಮೆರವಣಿಗೆ ಮಾಡುವುದು, ಬಲವಂತವಾಗಿ ಮೊಣಕಾಲು ಊರಿ ಕೂರಿಸುವ ಚಿತ್ರಗಳನ್ನು ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿರುವ ಇತ್ತೀಚಿನ ಪ್ರವೃತ್ತಿ ವ್ಯಕ್ತಿಯ ವೈಯಕ್ತಿಕ ಘನತೆಗೆ ಧಕ್ಕೆ ತರುವ ಜತೆಗೆ, ಸಾರ್ವಜನಿಕ ಪಕ್ಷಪಾತಕ್ಕೆ ಕಾರಣವಾಗುತ್ತದೆ ಎಂದು ವಕೀಲರು ವಾದಿಸಿದರು.
ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ನೀಡುವ ಮಾಹಿತಿ ಜವಾಬ್ದಾರಿಯುತ ಮತ್ತು ಸಮಂಜಸವಾಗಿರಬೇಕು ಹಾಗೂ ಪಕ್ಷಪಾತಕ್ಕೆ ಒಳಗಾಗಬಾರದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ-ವೀಡಿಯೋ ಅಪ್‌ಲೋಡ್ ಮಾಡುವುದು ಒಂದು ರೀತಿಯ ಡಿಜಿಟಲ್ ಬಂಧನಕ್ಕೆ ಹೋಲುತ್ತದೆ ಅಥವಾ ಅದಕ್ಕಿಂತ ವಿಭಿನ್ನವಾಗಿದೆ.
ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಎಡವುವುದು ಮತ್ತು ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವುದು ಕಳವಳಕಾರಿ. ಸತ್ಯ ಬಯಲು ಮಾಡಲು ಸ್ವತಂತ್ರ ತನಿಖೆ ನಡೆಸುವುದು ತನಿಖಾ ಸಂಸ್ಥೆಯ ಕರ್ತವ್ಯ. ಆದರೆ ಎಲ್ಲವನ್ನೂ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಅತ್ಯಂತ ಗಂಭೀರದ ವಿಚಾರ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.








