ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಅಂತಾರಾಷ್ಟ್ರೀಯ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಭಾರಿ ಆತಂಕ ಮತ್ತು ಸೃಷ್ಟಿಸಿದೆ. ಮಲೇಶಿಯಾದಿಂದ ಹೈದರಾಬಾದ್‌ಗೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಏರ್ ಏಷ್ಯಾ ಸಂಸ್ಥೆಯ ವಿಮಾನಕ್ಕೆ ಈ ಬೆದರಿಕೆ ಬಂದಿರುವುದು ಭದ್ರತಾ ಸಿಬ್ಬಂದಿಯನ್ನು ತೀವ್ರ ಆತಂಕಕ್ಕೆ ತಳ್ಳಿದೆ.
ವಿಮಾನದಲ್ಲಿ ಬಾಂಬ್ ಇಡಲಾಗಿದ್ದು, ಅದನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಸಂದೇಶ ರವಾನಿಸಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದ ಮುಖ್ಯ ಕಚೇರಿಗೆ ಅಧಿಕೃತ ಇ-ಮೇಲ್ (E-mail) ಮೂಲಕ ಈ ಭೀಕರ ಬೆದರಿಕೆ ಸಂದೇಶ ಬಂದಿದೆ. ಇ-ಮೇಲ್ ಗಮನಿಸಿದ ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಉನ್ನತ ಮಟ್ಟದ ಅಲರ್ಟ್ ಘೋಷಿಸಿದ್ದಾರೆ.
ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಪಡೆ (CISF), ಸ್ಥಳೀಯ ಪೊಲೀಸರು ಮತ್ತು ಬಾಂಬ್ ಪತ್ತೆ ಹಾಗೂ ನಾಶಪಡಿಸುವ ದಳ (BDDS) ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ವಿಮಾನವು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿಯುತ್ತಿದ್ದಂತೆ, ಅದನ್ನು ಪ್ರತ್ಯೇಕ ಬೇ (Isolation Bay) ಕಡೆಗೆ ಕೊಂಡೊಯ್ದು ತಪಾಸಣೆ ನಡೆಸಲು ಸರ್ವ ಸನ್ನದ್ಧತೆ ಮಾಡಿಕೊಳ್ಳಲಾಗಿದೆ.
ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಮಾನ ನಿಲ್ದಾಣದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದರೊಂದಿಗೆ, ಈ ನಕಲಿ ಅಥವಾ ಅಸಲಿ ಬೆದರಿಕೆ ಇ-ಮೇಲ್ ಕಳುಹಿಸಿದ ದುಷ್ಕರ್ಮಿಗಳು ಯಾರು ಮತ್ತು ಇದರ ಹಿಂದಿರುವ ಉದ್ದೇಶವೇನು ಎಂಬುದರ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.








