ಬೆಳಗಾವಿ : RBI ನಿಯಮ ಉಲ್ಲಂಘಿಸಿ, 35 ಸಾವಿರ ಜನರಿಂದ ಸಾವಿರಾರು ಕೋಟಿ ಹಣ ಠೇವಣಿ ಸಂಗ್ರಹಿಸಿದ ಆರೋಪದಡಿ ಬಂಧಿಸಲ್ಪಟ್ಟ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರ ಪ್ರಕರಣಕ್ಕೀಗ ಸಿಐಡಿ ಎಂಟ್ರಿ ಕೊಟ್ಟಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಶಿವಾನಂದ ನೀಲಣ್ಣವರ ಬಂಧನ ಮಾಡಿರುವ ಮಾಳಮಾರುತಿ ಪೊಲೀಸ್ ಠಾಣೆಗೆ ಬೆಂಗಳೂರಿನಿಂದ ಸಿಐಡಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಭೇಟಿ ನೀಡಿತು. ಸಿಐಡಿ ಡಿವೈಎಸ್ಪಿ ನೇತೃತ್ವದ ತಂಡವು ಪ್ರಕರಣದ ಕುರಿತು ಮಾಹಿತಿ ಕಲೆ ಹಾಕುತ್ತಿದೆ. ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರ ಬಳಿ ಹಲವು ಮಾಹಿತಿಯನ್ನು ಸಿಐಡಿ ತಂಡವು ಪಡೆದುಕೊಂಡಿತು.
ಆರ್ಬಿಐ ನಿಯಮ ಪಾಲಿಸದೇ 35,000 ಜನರಿಂದ ಠೇವಣಿ ಸಂಗ್ರಹಿಸಿರುವ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ಶಿವಾನಂದ ನೀಲಣ್ಣವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನಿನ್ನೆ ರಾತ್ರಿ ಆರೋಪಿನ್ನು ಬಂಧಿಸಲಾಗಿತ್ತು. ಎಸಿಪಿ ಸಂತೋಷ ಸತ್ಯನಾಯಕ ನೇತೃತ್ವದ ತಂಡವು ನಿನ್ನೆ ಇಡೀ ರಾತ್ರಿ ವಿಚಾರಣೆ ನಡೆಸಿದೆ. ಇಂದು ಬೆಳಗ್ಗೆ ಸ್ಥಳ ಮಹಜರಿಗೆ ಕರೆದೊಯ್ಯಲಾಗಿದೆ.
ತನಿಖಾಧಿಕಾರಿ ಎಸಿಪಿ ಸಂತೋಷ ಸತ್ಯನಾಯಕ್, ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಬೆಳಗಾವಿ ಶಿವಬಸವ ನಗರದಲ್ಲಿ ಮೂರು ಕಚೇರಿಗಳು, ಮನೆಯಲ್ಲಿ ಸ್ಥಳ ಮಹಜರು ಮಾಡಲಾಗುತ್ತಿದೆ. ಕಚೇರಿ ಮತ್ತು ಮನೆಯಲ್ಲಿರುವ ವಸ್ತು ಮತ್ತು ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಲಿದ್ದಾರೆ.








