ನವದೆಹಲಿ: ಪತ್ನಿಯಾದವಳು ಅಡುಗೆಯಂತಹ ಮನೆಗೆಲಸಗಳನ್ನು ಮಾಡದಿದ್ದ ಮಾತ್ರಕ್ಕೆ ಅದನ್ನು ‘ಕ್ರೌರ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಮೌಖಿಕ ಅವಲೋಕನ ಮಾಡಿದೆ. ವಿಚ್ಛೇದನ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಕಟು ಸತ್ಯವನ್ನು ಪತಿಗೆ ನೆನಪಿಸಿದೆ.
ವಿಚಾರಣೆಯ ವೇಳೆ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು, “ನೀವು ಮದುವೆಯಾಗಿರುವುದು ಜೀವನ ಸಂಗಾತಿಯನ್ನೇ ಹೊರತು ಮನೆಗೆಲಸ ಮಾಡುವವರನ್ನಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಬದಲಾದ ಕಾಲಕ್ಕೆ ತಕ್ಕಂತೆ ಪತಿಯೂ ಸಹಕರಿಸಬೇಕು
ಇದೇ ವೇಳೆ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಪುರುಷ ಪ್ರಧಾನ ಮನೋಭಾವದ ಬಗ್ಗೆ ಕಿಡಿನುಡಿದರು. “ಕಾಲ ಬದಲಾಗಿದೆ, ಇಂದಿನ ದಿನಗಳಲ್ಲಿ ಪತಿಯೂ ಸಹ ಅಡುಗೆ, ಬಟ್ಟೆ ಒಗೆಯುವಂತಹ ಮನೆಗೆಲಸಗಳಲ್ಲಿ ಕೈಜೋಡಿಸಬೇಕು. ಮನೆಯ ಜವಾಬ್ದಾರಿಯಲ್ಲಿ ನಿಮ್ಮ ಕೊಡುಗೆಯೂ ಇರಬೇಕು,” ಎಂದು ಪತಿಗೆ ಕಿವಿಮಾತು ಹೇಳಿದರು.
ಪ್ರಕರಣದ ಹಿನ್ನೆಲೆ ಏನು?
-
ವಿವಾಹ: ಈ ದಂಪತಿಗಳು 2017ರಲ್ಲಿ ವಿವಾಹವಾಗಿದ್ದರು ಮತ್ತು ಇವರಿಗೆ ಎಂಟು ವರ್ಷದ ಗಂಡು ಮಗನಿದ್ದಾನೆ.
-
ಪತಿಯ ಆರೋಪ: ಮದುವೆಯಾದ ಒಂದು ವಾರದ ನಂತರ ಪತ್ನಿಯ ವರ್ತನೆ ಬದಲಾಯಿತು. ಆಕೆ ನನ್ನ ಮತ್ತು ನನ್ನ ಪೋಷಕರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು, ಅಡುಗೆ ಮಾಡುತ್ತಿರಲಿಲ್ಲ ಮತ್ತು ಮಗುವಿನ ತೊಟ್ಟಿಲು ಶಾಸ್ತ್ರಕ್ಕೂ ನಮ್ಮನ್ನು ಆಹ್ವಾನಿಸಲಿಲ್ಲ ಎಂದು ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನು.
-
ಪತ್ನಿಯ ವಾದ: ಮಗುವಿನ ಜನನಕ್ಕಾಗಿ ಪತಿಯ ಅನುಮತಿಯೊಂದಿಗೇ ತವರು ಮನೆಗೆ ಹೋಗಿದ್ದೆ. ಆದರೆ ಪತಿ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರಿಂದ ಅವರೇ ತೊಟ್ಟಿಲು ಶಾಸ್ತ್ರಕ್ಕೆ ಬರಲಿಲ್ಲ ಎಂದು ಪತ್ನಿ ಪ್ರತಿವಾದ ಮಂಡಿಸಿದ್ದರು.
ನ್ಯಾಯಾಲಯದ ಹಾದಿ
ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ಪತ್ನಿಯ ವರ್ತನೆಯನ್ನು ‘ಕ್ರೌರ್ಯ’ ಎಂದು ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು.
ಸುಪ್ರೀಂ ಕೋರ್ಟ್ ಈ ಹಿಂದೆ ಇಬ್ಬರಿಗೂ ಸಂಧಾನ (Mediation) ಮಾಡಿಕೊಳ್ಳುವಂತೆ ಸೂಚಿಸಿತ್ತು, ಆದರೆ ಅದು ವಿಫಲವಾಯಿತು. ಇದೀಗ ಪ್ರಕರಣದ ಮುಂದಿನ ವಿಚಾರಣೆಗೆ ಪತಿ ಮತ್ತು ಪತ್ನಿ ಇಬ್ಬರೂ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ
ತೆರಿಗೆದಾರರೇ ಗಮನಿಸಿ: ಏಪ್ರಿಲ್ 1ರಿಂದ ಹೊಸ ‘ಆದಾಯ ತೆರಿಗೆ ನಿಯಮ 2026’ ಜಾರಿ; ಸರ್ಕಾರದ ಅಧಿಕೃತ ಅಧಿಸೂಚನೆ ಪ್ರಕಟ








