ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಭೂ ದಾಖಲೆಗಳನ್ನು ಕಂದಾಯ ಇಲಾಖೆಯ ಪಹಣಿ (RTC) ಗಳಲ್ಲಿ ಅಧಿಕೃತವಾಗಿ ದಾಖಲಿಸಲು ಮತ್ತು ಅಕ್ರಮ ಒತ್ತುವರಿಯನ್ನು ತಡೆಗಟ್ಟಲು ಕಂದಾಯ ಇಲಾಖೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತುರ್ತು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ ಅಧಿನಿಯಮ 2026′ ರ ಅನ್ವಯ, ಕನಿಷ್ಠ 12 ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಶಾಲೆ-ಕಾಲೇಜುಗಳು ಬಳಸುತ್ತಿರುವ ಭೂಮಿಯು ಎಲ್ಲಾ ಹಕ್ಕು, ದಾವೆ ಹಾಗೂ ಬಾಧ್ಯತೆಗಳಿಂದ ಮುಕ್ತಗೊಂಡು ರಾಜ್ಯ ಸರ್ಕಾರದ ಪರವಾಗಿ ನಿಹಿತವಾಗಿರುತ್ತದೆ.
ಆಯಾ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಹಂತದ ಶಾಲಾ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಹಾಗೂ ತಹಶೀಲ್ದಾರ್ಗಳ ಮೂಲಕ ಸಂಬಂಧಪಟ್ಟ ಪಹಣಿಗಳಲ್ಲಿ ಸರ್ಕಾರಿ ಶಾಲೆಯ ಹೆಸರನ್ನು ದಾಖಲಿಸಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಒಂದು ವೇಳೆ ಈ ಜಮೀನುಗಳಲ್ಲಿ ಯಾವುದೇ ರೀತಿಯ ಅಕ್ರಮ ಒತ್ತುವರಿ ಅಥವಾ ಅನಧಿಕೃತ ಬಳಕೆ ಕಂಡುಬಂದಲ್ಲಿ, ಜಿಲ್ಲಾಡಳಿತದ ಮೂಲಕ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ತುರ್ತಾಗಿ ವರದಿಯನ್ನು ಸಲ್ಲಿಸುವಂತೆ ಕಂದಾಯ ಆಯುಕ್ತರಾದ ಮುಲ್ಲೈ ಮುಹಿಲನ್ ಎಂ ಪೂರಾನಂ ಅವರು ತಮ್ಮ ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ. ಈ ಕ್ರಮದಿಂದಾಗಿ ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳ ಆಸ್ತಿ ಇನ್ಮುಂದೆ ಸುರಕ್ಷಿತವಾಗಲಿದ್ದು, ಒತ್ತುವರಿದಾರರಿಗೆ ಭೀತಿ ಎದುರಾಗಿದೆ.








