ಚಿಕ್ಕಮಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮಗಳು ಇದೀಗ ಹಳ್ಳಿಗಾಡಿನ ಶಾಲೆಗಳ ಮೇಲೂ ಬೀರಲಾರಂಭಿಸಿವೆ. ಅಡುಗೆ ಅನಿಲದ (LPG) ತೀವ್ರ ಅಭಾವದಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸರ್ಕಾರಿ ಶಾಲೆಯಲ್ಲಿ ಸೌದೆ ಒಲೆಯಲ್ಲೇ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೌದೆ ಒಲೆಯ ಮೊರೆ ಹೋದ ಸಿಬ್ಬಂದಿ: ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಐದು ದಿನಗಳಿಂದ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ. ಹೊಸ ಸಿಲಿಂಡರ್‌ಗಳು ಸರಬರಾಜಾಗದ ಕಾರಣ, ಬಿಸಿಯೂಟದ ಸಿಬ್ಬಂದಿ ಅನಿವಾರ್ಯವಾಗಿ ಬಯಲಿನಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಸುಮಾರು 60 ರಿಂದ 70 ವಿದ್ಯಾರ್ಥಿಗಳಿದ್ದು, ಅವರೆಲ್ಲರಿಗೂ ಸೌದೆ ಒಲೆಯಲ್ಲಿ ಅಡುಗೆ ಸಿದ್ಧಪಡಿಸುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಿರ್ಲಕ್ಷ್ಯದ ಆರೋಪ: ಜಿಲ್ಲಾಧಿಕಾರಿಗಳು ಗ್ಯಾಸ್ ಪೂರೈಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದರೂ ಸಹ, ಗ್ಯಾಸ್ ಏಜೆನ್ಸಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. “ಗ್ಯಾಸ್ ಇಲ್ಲದೆ ಸೌದೆಯಲ್ಲೇ ಅಡುಗೆ ಮಾಡುವುದು ತುಂಬಾ ಕಷ್ಟವಾಗುತ್ತಿದೆ. ಹೊಗೆಯ ನಡುವೆ ಇಷ್ಟು ಜನ ಮಕ್ಕಳಿಗೆ ಊಟ ತಯಾರಿಸುವುದು ಸಾಹಸದ ಕೆಲಸವಾಗಿದೆ” ಎಂದು ಅಡುಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಪರೀಕ್ಷೆಯ ಸಮಯದಲ್ಲೇ ಆತಂಕ: ಪ್ರಸ್ತುತ ಶಾಲೆಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಅಭ್ಯಾಸದಲ್ಲಿ ತೊಡಗಿದ್ದಾರೆ. ಇಂತಹ ಸಮಯದಲ್ಲಿ ಮೂಲಭೂತ ಸೌಕರ್ಯವಾದ ಅಡುಗೆ ಅನಿಲಕ್ಕೂ ತೊಂದರೆಯಾಗಿರುವುದು ಆಡಳಿತ ಮಂಡಳಿಯನ್ನು ಚಿಂತೆಗೆ ಈಡುಮಾಡಿದೆ. ಕೂಡಲೇ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಶಾಲೆಗೆ ಗ್ಯಾಸ್ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
ಪ್ರತಿಷ್ಠಿತ ಆಸ್ಕರ್ 2026 ಪ್ರಶಸ್ತಿ ಘೋಷಣೆ: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ!








