ನಾರ್ವೆಯಲ್ಲಿ ಸೋಮವಾರ ರಾತ್ರಿ ನಡೆದ ಭಾರತೀಯ ವಿದೇಶಾಂಗ ಸಚಿವಾಲಯದ (MEA) ಮಾಧ್ಯಮಗೋಷ್ಠಿಯು ವಿವಾದಕ್ಕೆ ಕಾರಣವಾಯಿತು. ಮಹಿಳಾ ನಾರ್ವೇಜಿಯನ್ ಪತ್ರಕರ್ತೆಯೊಬ್ಬರು ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ರಾಜತಾಂತ್ರಿಕರನ್ನು ಪದೇ ಪದೇ ತಡೆದು, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಕುರಿತು ಪ್ರಶ್ನೆಗಳನ್ನು ಕೇಳಿದರು.
ನಾರ್ವೆಯ ಪತ್ರಕರ್ತಿ ಹೆಲ್ಲೆ ಲಿಂಗ್ ಅವರು ಪ್ರಜಾಪ್ರಭುತ್ವದ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರತವನ್ನು ಏಕೆ ‘ನಂಬಬೇಕು’ ಎಂದು ಪ್ರಶ್ನಿಸಿದರು. ಈಗ ಈ ಕುರಿತು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಈ ಸಂಭಾಷಣೆಯು ಅಂತರ್ಜಾಲದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದು, ಬಳಕೆದಾರರು ಮಾಧ್ಯಮ ಸ್ವಾತಂತ್ರ್ಯದ ವಿಷಯದಲ್ಲಿ ಇಬ್ಬಾಗವಾಗಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿಯವರು ಭಾರತದಲ್ಲಿ ಇದುವರೆಗೆ ಯಾವುದೇ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬುದನ್ನೂ ಹಲವರು ಪ್ರಸ್ತಾಪಿಸಿದ್ದಾರೆ.
ನಾರ್ವೆ ಪತ್ರಕರ್ತೆಯ ಪ್ರಶ್ನೆಗೆ ಸಿಬಿ ಜಾರ್ಜ್ ನೀಡಿದ ಖಡಕ್ ಉತ್ತರ:
ಪಾಶ್ಚಿಮಾತ್ಯ ದೇಶಗಳಿಗೆ ತೀಕ್ಷ್ಣವಾಗಿ ನೆನಪಿಸಿದ ಸಿಬಿ ಜಾರ್ಜ್ ಅವರು, “ಭಾರತವು ವಿಶ್ವದ ಒಟ್ಟು ಜನಸಂಖ್ಯೆಯ ಆರನೇ ಒಂದು ಭಾಗವನ್ನು ಹೊಂದಿದ್ದರೂ ಸಹ, ಪ್ರಪಂಚದ ಸಮಸ್ಯೆಗಳಲ್ಲಿ ಆರನೇ ಒಂದು ಭಾಗದಷ್ಟು ಕೊಡುಗೆಯನ್ನು ಭಾರತ ನೀಡುತ್ತಿಲ್ಲ” ಎಂದರು. ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ನಮ್ಮಲ್ಲಿ ಜನರಿಗೆ ಮೂಲಭೂತ ಹಕ್ಕುಗಳ ಗ್ಯಾರಂಟಿ ನೀಡುವ ಸಂವಿಧಾನವಿದೆ. ನಮ್ಮ ದೇಶದ ಮಹಿಳೆಯರಿಗೆ ಸಮಾನ ಹಕ್ಕುಗಳಿವೆ, ಇದು ಅತ್ಯಂತ ಮುಖ್ಯವಾದ ವಿಷಯ” ಎಂದರು.
”1947 ರಲ್ಲಿ ನಾವು ನಮ್ಮ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದೆವು. ನಮಗೆ ಒಟ್ಟಿಗೆ ಸ್ವಾತಂತ್ರ್ಯ ಸಿಕ್ಕಿತು ಮತ್ತು ಮೊದಲ ದಿನದಿಂದಲೇ ಮಹಿಳೆಯರಿಗೂ ಮತದಾನದ ಹಕ್ಕು ಸಿಕ್ಕಿತು. ಮಹಿಳೆಯರಿಗೆ ಮತದಾನದ ಹಕ್ಕು ಸಿಗಲು ಹಲವಾರು ದಶಕಗಳೇ ಬೇಕಾದ ಅನೇಕ ದೇಶಗಳು ನನಗೆ ಗೊತ್ತು. ನಾವು ಸಮಾನತೆಯನ್ನು ನಂಬುತ್ತೇವೆ; ನಾವು ಮಾನವ ಹಕ್ಕುಗಳನ್ನು ನಂಬುತ್ತೇವೆ. ಯಾರದ್ದಾದರೂ ಹಕ್ಕುಗಳ ಉಲ್ಲಂಘನೆಯಾದರೆ, ಅವರಿಗೆ ನ್ಯಾಯಾಲಯಕ್ಕೆ ಹೋಗುವ ಹಕ್ಕಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದಕ್ಕೆ ಹೆಮ್ಮೆಪಡುತ್ತೇವೆ” ಎಂದು ಅವರು ಹೇಳಿದರು.
”ಅಜ್ಞಾನಿ NGOಗಳ ವರದಿ ಓದಿ ಪ್ರಶ್ನೆ ಮಾಡಬೇಡಿ”
ಭಾರತದ ಮಾಧ್ಯಮ ವ್ಯವಸ್ಥೆಯ ವ್ಯಾಪಕವಾದ ವಿಸ್ತಾರವನ್ನು ಜನರು ಅರ್ಥಮಾಡಿಕೊಳ್ಳದೆ, ಕೆಲವು “ಅಜ್ಞಾನಿ ಎನ್‌ಜಿಒಗಳು” (NGOs) ಪ್ರಕಟಿಸಿದ ವರದಿಗಳನ್ನು ಓದಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಸಿಬಿ ಜಾರ್ಜ್ ಹೇಳಿದರು.
”ಇಲ್ಲಿ ಎಷ್ಟು ಸುದ್ದಿಗಳು ಬಿತ್ತರವಾಗುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಪ್ರತಿದಿನ ಸಂಜೆ ಎಷ್ಟು ಬ್ರೇಕಿಂಗ್ ನ್ಯೂಸ್‌ಗಳು ಬರುತ್ತವೆ? ದೆಹಲಿಯೊಂದರಲ್ಲೇ ಇಂಗ್ಲಿಷ್, ಹಿಂದಿ ಮತ್ತು ವಿವಿಧ ಭಾಷೆಗಳಲ್ಲಿ ಕನಿಷ್ಠ 200 ಟಿವಿ ಚಾನೆಲ್‌ಗಳಿವೆ. ಜನರಿಗೆ ಭಾರತದ ವ್ಯಾಪ್ತಿ ಮತ್ತು ಗಾತ್ರದ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಜನರು ಯಾವುದೋ ಗಾಡ್-ಫೊರ್ಸೇಕನ್ (ಅನಾಮಧೇಯ), ಅಜ್ಞಾನಿ ಎನ್‌ಜಿಒಗಳು ಪ್ರಕಟಿಸಿದ ಒಂದು ಅಥವಾ ಎರಡು ಸುದ್ದಿ ವರದಿಗಳನ್ನು ಓದಿಕೊಂಡು ಬಂದು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ” ಎಂದು ಅವರು ತರಾಟೆಗೆ ತೆಗೆದುಕೊಂಡರು.
ವಿವಾದಕ್ಕೆ ಕಾರಣವಾಗಿದ್ದು ಏನು?
ನಾರ್ವೆಯ ಪತ್ರಿಕೆಯೊಂದರ ವಿಶ್ಲೇಷಕಿಯೊಬ್ಬರು ಎಕ್ಸ್ (X) ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪ್ರಧಾನಿ ಮೋದಿಯವರು ತಮ್ಮ ಪ್ರಶ್ನೆಯನ್ನು ಸ್ವೀಕರಿಸಲಿಲ್ಲ ಎಂದು ಬರೆದುಕೊಂಡ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ. ಅವರು ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (World Press Freedom Index) ಭಾರತ ಮತ್ತು ನಾರ್ವೆ ಹೊಂದಿರುವ ಶ್ರೇಯಾಂಕಗಳ ಬಗ್ಗೆಯೂ ಮಾತನಾಡಿದ್ದರು.
ಪತ್ರಕರ್ತಿ ಹೆಲ್ಲೆ ಲಿಂಗ್ ಎಕ್ಸ್‌ನಲ್ಲಿ, ‘ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದೆ, ಆದರೆ ಭಾರತವು ಪ್ಯಾಲೆಸ್ತೀನ್, ಯುಎಇ (ಎಮಿರೇಟ್ಸ್) ಮತ್ತು ಕ್ಯೂಬಾ ದೇಶಗಳೊಂದಿಗೆ ಪೈಪೋಟಿ ನಡೆಸುತ್ತಾ 157ನೇ ಸ್ಥಾನದಲ್ಲಿದೆ. ನಾವು ಯಾರೊಂದಿಗೆ ಸಹಕರಿಸುತ್ತೇವೆಯೋ ಆ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ನಮ್ಮ ಕೆಲಸ’ ಎಂದು ಬರೆದಿದ್ದರು. ಪ್ರಧಾನಿ ಮೋದಿಯವರ ಪ್ರಸ್ತುತ ಬಹು-ರಾಷ್ಟ್ರಗಳ ಯುರೋಪ್ ಪ್ರವಾಸದ ಭಾಗವಾಗಿ ನಾರ್ವೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಾಗ್ಯುದ್ಧ ನಡೆದಿದೆ.








