ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿದ್ದ (School Dropout) 13 ವರ್ಷದ ಬಾಲಕನೊಬ್ಬನನ್ನು ಆತನ ಇಬ್ಬರು ಅಪ್ರಾಪ್ತ ಶಾಲಾ ಸ್ನೇಹಿತರೇ ಕೊಲೆ ಮಾಡಿ, ಶವವನ್ನು ಹೂತುಹಾಕಿದ್ದಾರೆ. ಈ ಘಟನೆಯು ಇಡೀ ಪ್ರದೇಶವನ್ನು ಆಘಾತಕ್ಕೀಡು ಮಾಡಿದ್ದು, ಅಪ್ರಾಪ್ತ ವಯಸ್ಕರ ನಡವಳಿಕೆ ಮತ್ತು ಅವರಿಗೆ ಮದ್ಯ ಸಿಗುತ್ತಿರುವ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಮೃತ ಬಾಲಕ ಕೊಯಮತ್ತೂರು ಜಿಲ್ಲೆಯ ಇರುಗೂರು ಪ್ರದೇಶದವನಾಗಿದ್ದಾನೆ.
ತನಿಖಾಧಿಕಾರಿಗಳ ಪ್ರಕಾರ, ಆ ಬಾಲಕ ಶನಿವಾರದಂದು ತನ್ನ ಇಬ್ಬರು ಗೆಳೆಯರೊಂದಿಗೆ ನಿರ್ಜನವಾದ ಕಾಲುವೆಯೊಂದರ ಬಳಿ ಮೀನು ಹಿಡಿಯಲು ಹೋಗಿದ್ದನು.ಹೊರಗಡೆ ಹೋದಾಗ ಈ ಮೂವರೂ ಮದ್ಯ ಸೇವಿಸಿದ್ದರು ಮತ್ತು ಆ ಸಮಯದಲ್ಲಿ ಅವರ ನಡುವೆ ಜಗಳ ಆರಂಭವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಮೃತ ಬಾಲಕನು ಮದ್ಯದ ಬಾಟಲಿಯಿಂದ ಇತರ ಹುಡುಗರಲ್ಲಿ ಒಬ್ಬನ ಮೇಲೆ ದಾಳಿ ಮಾಡಿದಾಗ ಜಗಳವು ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ಈ ಸಂಘರ್ಷವು ತಕ್ಷಣವೇ ಪರಸ್ಪರ ದೈಹಿಕ ಹಲ್ಲೆಗೆ ತಿರುಗಿದ್ದು, ಈ ವೇಳೆ ಆ ಇಬ್ಬರು ಹುಡುಗರು ಮರುದಾಳಿ ನಡೆಸಿ ಆತನನ್ನು ಕೊಂದಿದ್ದಾರೆ ಎನ್ನಲಾಗಿದೆ.
ತಮ್ಮ ಸ್ನೇಹಿತ ಮೃತಪಟ್ಟಿರುವುದನ್ನು ಅರಿತ ಹುಡುಗರು, ಸಿಕ್ಕಿಬೀಳುವ ಭಯದಿಂದ ಶವವನ್ನು ಅದೇ ಜಾಗದಲ್ಲಿ ಹೂತುಹಾಕಿ ಏನೂ ತಿಳಿಯದಂತೆ ಮನೆಗೆ ಮರಳಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ಬಾಲಕ ಮನೆಗೆ ಬಾರದಿದ್ದಾಗ ಆತನ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು.ತನಿಖೆಯ ಸಂದರ್ಭದಲ್ಲಿ ಪೊಲೀಸರು ಆ ಇಬ್ಬರು ಹುಡುಗರನ್ನು ವಿಚಾರಣೆ ನಡೆಸಿದಾಗ, ಭಾನುವಾರ ರಾತ್ರಿ ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಇದಾದ ನಂತರ ಪೊಲೀಸರು ಹೂತುಹಾಕಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು ಮತ್ತು ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
”ಆರೋಪಿಗಳು ಅಪ್ರಾಪ್ತರಾಗಿರುವುದರಿಂದ ನಾವು ಅವರನ್ನು ವೀಕ್ಷಣಾ ಗೃಹಕ್ಕೆ (Observation Home) ಕಳುಹಿಸುತ್ತೇವೆ. ಸದ್ಯ ತನಿಖೆ ಪ್ರಗತಿಯಲ್ಲಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿ (NDTV) ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾದವರೆಲ್ಲರೂ ಅಪ್ರಾಪ್ತ ವಯಸ್ಸಿನವರೇ ಆಗಿರುವುದರಿಂದ ಈ ಘಟನೆಯು ಆ ಪ್ರದೇಶದಲ್ಲಿ ತೀವ್ರ ಆಘಾತವನ್ನು ಉಂಟುಮಾಡಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಈ ಘಟನೆಯನ್ನು ಎಕ್ಸ್ (X) ಜಾಲತಾಣದಲ್ಲಿ “ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುವಂತಹದ್ದು” ಎಂದು ಬಣ್ಣಿಸಿದ್ದಾರೆ. ಅವರು ಪೋಷಕರಲ್ಲಿ, “ನಿಮ್ಮ ಮಕ್ಕಳ ಸಂಭಾಷಣೆಗಳನ್ನು ಗಮನಿಸಿ ಮತ್ತು ಅವರನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಿ” ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಶಿಕ್ಷಕರು “ಕೇವಲ ಜ್ಞಾನವನ್ನು ಮಾತ್ರವಲ್ಲದೆ, ತಾಳ್ಮೆ ಮತ್ತು ಪ್ರೀತಿಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು” ಎಂದು ಹೇಳಿದ್ದಾರೆ.








