ಮಂಗಳೂರು: ಬಜೆಟ್‌ನಲ್ಲಿ ಕಾಲೇಜು ಚುನಾವಣೆ ನಡೆಸುವ ಕುರಿತು ಘೋಷಣೆಯಾಗುತ್ತಿದ್ದಂತೆ ಕರಾವಳಿಯ ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ಚುನಾವಣಾ ಕಾವು ಏರತೊಡಗಿದೆ. ಆದರೆ, ಈ ಸಂಭ್ರಮದ ನಡುವೆಯೇ ವಿದ್ಯಾರ್ಥಿ ಸಂಘಟನೆಗಳ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದ್ದು, ಕ್ಯಾಂಪಸ್ ಅಂಗಳ ಈಗ ರಣರಂಗವಾಗಿ ಮಾರ್ಪಟ್ಟಿದೆ.
ಬಜೆಟ್‌ನಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಹಸಿರು ನಿಶಾನೆ ಸಿಕ್ಕಿದ್ದೇ ತಡ, ಮಂಗಳೂರಿನ ಪ್ರಮುಖ ಕಾಲೇಜುಗಳಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ತಮ್ಮ ಅಸ್ತಿತ್ವ ಪ್ರದರ್ಶಿಸಲು ಮುಂದಾಗಿವೆ. ಈ ವೇಳೆ ಪೋಸ್ಟರ್ ಅಂಟಿಸುವ ವಿಚಾರ ಹಾಗೂ ಪ್ರಚಾರದ ಹಮ್ಮುವಿಕೆ ಕುರಿತು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ್ದು ಅಷ್ಟೇ, ಇನ್ನು ಅದು ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಅಷ್ಟರಲ್ಲೇ ಮಂಗಳೂರಿನ ಪ್ರತಿಷ್ಠಿತ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜಕೀಯ ಕಿಚ್ಚು ಭುಗಿಲೆದ್ದಿದೆ. ಕಾಂಗ್ರೆಸ್ ಬೆಂಬಲಿತ NSUI ಮತ್ತು ಬಿಜೆಪಿ ಬೆಂಬಲಿತ ABVP ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನಿಂದ ಕಾಲೇಜು ಆವರಣ ರಣರಂಗವಾಗಿ ಮಾರ್ಪಟ್ಟಿದೆ.
ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸಿ ಕಾಲೇಜನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ರಸ್ತೆ ತಡೆ ನಡೆಸಿದರು. ರಾಜಕೀಯ ಘೋಷಣೆ ಕೂಗಲು ಅವಕಾಶ ನೀಡಿದ ಪ್ರಾಂಶುಪಾಲ ಗಣಪತಿ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಲಾಯಿತು. ವಿದ್ಯಾರ್ಥಿಗಳ ವಾಗ್ವಾದಕ್ಕೆ ಪ್ರಾಂಶುಪಾಲರು ತತ್ತರಿಸಿ ಹೋದರು.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ವಿದ್ಯಾರ್ಥಿಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗಳ ನಡುವೆ ‘ಬಿಗ್ ಫೈಟ್’ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಕಾಲೇಜು ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಘಟನೆಯಿಂದಾಗಿ ಇತರೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಕಾಲೇಜುಗಳ ಬಳಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.







