ದಕ್ಷಿಣ ಕನ್ನಡ : ಮುಂಬರುವ 2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಅವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳದಲ್ಲಿ ಮನವಿ ಮಾಡಿದರು. ಬಂಟ್ವಾಳದ ನಾವೂರು ಕೂಡಿಬೈಲು ಎಂಬಲ್ಲಿ ಕಂಬಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಮಾನಾಥ ರೈ ಅವರು ಶಾಸಕ, ಸಚಿವರಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಜನರು ಸೋಲಿಸಿರುವುದು ನೋವಿನ ಸಂಗತಿಯಾಗಿದೆ. ರಮಾನಾಥ ರೈ ಕ್ಷೇತ್ರಕ್ಕೆ ಐದು ಸಾವಿರ ಕೋಟಿ ರೂಪಾಯಿಯನ್ನು ಕಳೆದ ಅವಧಿಯಲ್ಲಿ ತರಿಸಿ ಅಭಿವೃದ್ಧಿ ಮಾಡಲಾಗಿತ್ತು. ಆದರೂ ಅವರನ್ನು ಕ್ಷೇತ್ರದ ಜನ ಸೋಲಿಸಿದರು. ಇದು ನೋವಿನ ಸಂಗತಿ ಅಲ್ವಾ? ಇನ್ನೊಂದು ಸಾರಿ ಅವರು ನಿಲ್ಲುತ್ತಾರೆ. 2028ಕ್ಕೆ ಮತ್ತೆ ಅಭ್ಯರ್ಥಿ ಆಗುತ್ತಾರೆ, ಪ್ರಾಮಾಣಿಕ ಸಚಿವರಲ್ಲಿ ರಮಾನಾಥ ರೈ ಕೂಡ ಒಬ್ಬರಾಗಿದ್ದರು. ಹೀಗಾಗಿ ಅವರು ಮತ್ತೆ ಗೆಲ್ಲಬೇಕು ಎಂದರು.








