ತುಮಕೂರು : ಕಳೆದ ಜನೆವರಿಯಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿ ಗ್ರಾಮದ ಪರಮೇಶ್ ಎಂಬುವವರ ಸಾವಿನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಪರಮೇಶ್ ಮೃತಪಟ್ಟು ಇನ್ನೂ ತಿಂಗಳು ಕಳೆದಿರಲಿಲ್ಲ, ಅಷ್ಟರಲ್ಲೇ ಆತನ ಪತ್ನಿ ಆಶಾ ಇನ್ನೊಂದು ಮದುವೆಯಾದ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಆಶಾ ಸೇರಿದಂತೆ ಇಬ್ಬರನ್ನು ಪೊಲೀಸರು ಅರೆಸ್ಟ್ ಮಡಿದ್ದಾರೆ.
ಪತಿ ಮೃತಪಟ್ಟ 20 ದಿನಕ್ಕೆ ಆತನ ಪತ್ನಿ ಮತ್ತೊಂದು ಮದುವೆಯಾದ ನಂತರ ಪತಿ ಕೊಲೆಯಾಗಿದ್ದಾನೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಆತನ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ. ಕೊಲೆ ಮಾಡಿದ್ದ ಮೃತನ ಪತ್ನಿ ಮತ್ತು ಮೂರನೇ ಗಂಡ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.
ಪ್ರಕರಣ ಹಿನ್ನೆಲೆ?
ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎಂದು ಪರಮೇಶ್ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿತ್ತು. ತುಮಕೂರು ತಾಲೂಕಿನ ಹೆಬ್ಬೂರಿನ ದಾಸರಹಳ್ಳಿ ನಿವಾಸಿ ಮೃತ ಪರಮೇಶ್ ಅವರು ಆಶಾಳನ್ನ ಎರಡನೇ ಮದುವೆ ಆಗಿದ್ದರು. ಮಾಗಡಿ ಮೂಲದ ಆಶಾ ತನ್ನ ಗಂಡ ಸತ್ತ ಬಳಿಕ ಪರಮೇಶ್ನ 2ನೇ ಪತ್ನಿಯಾಗಿ 10 ವರ್ಷ ಸಂಸಾರ ಮಾಡಿದ್ದರು.
ಆದ್ರೆ ಜನವರಿ 30ರಂದು ಪರಮೇಶ್ ಮೃತಪಟ್ಟಿದ್ದ. ಹಾರ್ಟ್ ಅಟ್ಯಾಕ್ ಆಗಿದೆ ಎಂದು ಆಶಾ ತರಾತುರಿಯಲ್ಲಿ ಗಂಡನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಪರಮೇಶ್ ಅವರ ಅಂತ್ಯ ಸಂಸ್ಕಾರವನ್ನು ಪೊಲೀಸರ ಗಮನಕ್ಕೆ ತಾರದೆ ನಡೆಸಲಾಗಿತ್ತು. ಫೆಬ್ರವರಿ 17ರಂದು ಪರಮೇಶನ ಪತ್ನಿ ಆಶಾ ಅವರು ಚಂದ್ರಪ್ಪ ಎಂಬುವರ ಜೊತೆ ಮತ್ತೊಂದು ಮದುವೆ ಆಗಿದ್ದರು. ಹೀಗಾಗಿ, ಅನುಮಾನಗೊಂಡ ಮೃತ ಪರಮೇಶ್ನ ಸಹೋದರಿ ನಾಗಮ್ಮ ಅವರು, ಪರಮೇಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಫೆಬ್ರವರಿ 19ರಂದು ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಫೆಬ್ರವರಿ 24ರಂದು ಪರಮೇಶ್ ಅವರ ಮೃತ ದೇಹವನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೊರತೆಗೆಯಲಾಗಿತ್ತು. ಅಲ್ಲದೇ, ಮೃತ ದೇಹದ ಪೋಸ್ಟ್ ಮಾರ್ಟಮ್ ಮಾಡಿದ ನಂತರ ಪರಮೇಶನ ಪತ್ನಿ ಆಶಾ ಹಾಗೂ ಚಂದ್ರಪ್ಪ ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಯಿತು.ಅಜ್ಞಾತ ವ್ಯಕ್ತಿ ಹಾಗೂ ಆಶಾ ಅವರು ಪರಮೇಶ್ವರ್ನನ್ನು ಸಾಯಿಸಿದ್ದಾರೆ ಎಂಬುದು ತಿಳಿದುಬಂತು. ಈ ಹಿನ್ನೆಲೆ ನಾವು ಕೊಲೆ ಕೇಸ್ ದಾಖಲಿಸಿಕೊಂಡು ತಕ್ಷಣವೇ ಆಶಾ ಹಾಗೂ ಚಂದ್ರಪ್ಪರನ್ನು ಪೊಲೀಸರು ಅರೆಸ್ಟ್ ಮಾಡಿ ಇದೀಗ ಜೈಲಿಗೆ ಅಟ್ಟಿದ್ದಾರೆ.








