ಬೆಂಗಳೂರು : ಇತ್ತೀಚಿಗೆ ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಳಿಕ ಇದರಲ್ಲಿ ಸಾವಿರ ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಗಂಭೀರವಾದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಕೆಪಿಎಸ್ಸಿ ತನಿಕ ತಂಡ ರಚನೆ ಮಾಡಿ ತನಿಖೆ ನಡೆಸುತ್ತಿರುವಾಗಲೇ ಇದೀಗ ಕೆಪಿಎಸ್ಸಿ ವಿರುದ್ಧ ಮತ್ತೊಂದು ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.
ಹೌದು 2024ರ ಅ.27ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಎಫ್‌ಡಿಎ, ಎಸ್‌ಡಿಎ, ವಿಎಒ, ಪರೀಕ್ಷೆಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು, 2024ರ ಡಿ.8ರಂದು ಕೆಪಿಎಸ್ಸಿ ನಡೆಸಿದ ಪಿಡಿಒ ಪರೀಕ್ಷೆಯ ಅರ್ಹತಾ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಕೆಲವರು ಪರಸ್ಪರ ಸಂಬಂಧಿಕರೇ ಆಗಿದ್ದು, ಇನ್ನು ಕೆಲವರು ರಾಜಕೀಯ ವ್ಯಕ್ತಿಗಳ ಆಪ್ತವಲಯದಲ್ಲಿ ಗುರುತಿಸಿಕೊಂಡವರೂ ಇದ್ದಾರೆ. ಕೆಎಎಸ್ ರೀತಿಯಲ್ಲೇ ಒಂದೇ ಕೊಠಡಿಯಲ್ಲಿ ಇದ್ದವರೇ ಇಲ್ಲೂ ಆಯ್ಕೆಯಾಗಿದ್ದಾರೆ. ಇದು ಹೇಗೆ ಸಾಧ್ಯ? ಈ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಪಟ್ಟಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದ ದೂರು ಲೋಕಭವನದ ಅಂಗಳ ತಲುಪಿದ್ದು, 15 ದಿನದಲ್ಲಿ ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಬಿಐ ತನಿಖೆ ಆಗದಿದ್ದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ ನೀಡಿದೆ.








