ಮೈಸೂರು : ನನ್ನ ವ್ಯಕ್ತಿತ್ವದಿಂದ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆದೆ. ನೀವು ಆಶೀರ್ವಾದ ಮಾಡಿದ್ದರಿಂದಲೇ ಎಂಟು ಚುನಾವಣೆಯಲ್ಲಿ ಗೆದ್ದಿದ್ದೇನೆ ನೀವು ಗೆಲ್ಲಿಸಿದ್ದರಿಂದಲೇ ನಾನು ಸಿಎಂ ಆಗಲು ಸಾಧ್ಯವಾಯಿತು. ಹೀಗಾಗಿ ನಾನು ಮೈಸೂರು ತಾಲೂಕಿನ ಜನರನ್ನು ಮರೆಯುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಯಾವಾಗಲೂ ಇರಲಿ ಎಂದು ಪಿಲ್ಲಹಳ್ಳಿಯ ದಂಡಿನ ಮಾರಮ್ಮ ದೇಗುಲದಲ್ಲಿ ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಚಾಮುಂಡೇಶ್ವರಿ ವರುಣ ಕ್ಷೇತ್ರದ ಜನರಿಗೆ ಕೃತಜ್ಞತೆಯಿಂದ ಇರುವೆ, ವಿಶೇಷವಾಗಿ ಪಿಲ್ಲಹಳ್ಳಿ ಜನ ಯಾವತ್ತೂ ಕೈ ಬಿಟ್ಟಿಲ್ಲ. ದೇವರು ದೇವಸ್ಥಾನದ ಒಳಗೆ ಇರುತ್ತಾನೆ ಅನ್ನೋದು ನಂಬಿಕೆ ಅಷ್ಟೇ. ಪೂಜೆ ಮಾಡುವುದರಿಂದ ಒಳ್ಳೆಯದು ಆಗುತ್ತೆ ಅನ್ನೋ ನಂಬಿಕೆ ಇದೆ. ನಾನು ಅದಕ್ಕೆ ವಿರೋಧವಾಗಿಲ್ಲ. ನಮ್ಮೂರಲ್ಲೂ ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾನು ಚಿಕ್ಕವನಿದ್ದಾಗ ತಂಬಿಟ್ಟು ಆರತಿ ತೆಗೆದುಕೊಂಡು ಹೋಗುತ್ತಿದ್ದೆ. ಆಗ ತಂಬಿಟ್ಟು ಕೊಬ್ಬರಿ ಮಿಠಾಯಿ ತಿನ್ನುವುದೇ ಮಜಾ.
ಕಷ್ಟಕಾಲ ಬಂದಾಗ ಮಾತ್ರ ದೇವರನ್ನು ಪ್ರಾರ್ಥನೆ ಮಾಡಬೇಡಿ. ಎಲ್ಲಾ ಕಾಲದಲ್ಲೂ ದೇವರನ್ನು ಪ್ರಾರ್ಥಿಸಿ. ದೇವನೊಬ್ಬ ನಾಮ ಹಲವು ಅನ್ನೋದನ್ನು ಎಲ್ಲರೂ ತಿಳಿದುಕೊಳ್ಳಿ. ದೇವರು ಒಬ್ಬರೇ ಅವರು ಎಲ್ಲಾ ಕಡೆ ಇದ್ದಾರೆ ನಮ್ಮಲ್ಲೂ ಇದ್ದಾರೆ. ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಮಾತ್ರ ದೇವರು ಒಲಿಯುತ್ತಾನೆ. ಅಂತಲ್ಲ. ಕೆಟ್ಟದ್ದನ್ನು ಬಯಸಬಾರದು ಕೆಟ್ಟದಾಗಲಿ ಅಂದುಕೊಳ್ಳಬಾರದು ಎಲ್ಲರಿಗೂ ಒಳ್ಳೆಯದಾಗಲಿ ಅಂದಾಗ ಮಾತ್ರ ದೇವರು ಒಲಿಯುತ್ತಾನೆ. ಒಬ್ಬರಿಗೆ ಮಾತ್ರ ಒಳ್ಳೆಯದು ಮಾಡು ಅಂದರೆ ಒಳ್ಳೆಯದಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.








