ಕೇರಳ : ಬಹು ವಿವಾದಿತ ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಈ ಸಿನಿಮಾದ ಟೀಸರ್ ವಿವಾದ ಸ್ವರೂಪ ಪಡೆದುಕೊಂಡಿತ್ತು. ಒತ್ತಾಯಪೂರ್ವಕವಾಗಿ ಗೋಮಾಂಸ ಸೇವನೆ ಮಾಡಿಸುತ್ತಿರುವ ದೃಶ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಹಿನ್ನೆಲೆ
ಕೇರಳ ಸ್ಟೋರಿ 2 ಸಿನಿಮಾವು ಕೇರಳ ರಾಜ್ಯದ ವಾಸ್ತವಾಂಶವನ್ನು ತಪ್ಪಾಗಿ ಪ್ರತಿನಿಧಿಸುತ್ತಿದೆ ಮತ್ತು ಇದು ಕೇರಳದ ಕೋಮು ಸಾಮರಸ್ಯವನ್ನು ಭಂಗಗೊಳಿಸಬಹುದು ಎಂದು ಅರ್ಜಿದಾರರು ವಾದಿಸಿದ್ದರು. ಇದೀಗ ವಿಚಾರಣೆಯಲ್ಲಿ ಈ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಫೆಬ್ರವರಿ 27ರಂದು ದಿ ಕೇರಳ ಸ್ಟೋರಿ 2 ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಸಿನಿಮಾ ತಂಡ ಮುಂದಾಗಿತ್ತು. ಆದರೆ ಇದೀಗ ಸಿನಿಮಾ ತಂಡಕ್ಕೆ ಭಾರೀ ಮುಖಭಂಗವಾಗಿದೆ. ಕೇರಳದಲ್ಲಿ ಈ ಸಿನಿಮಾದ ಟೀಸರ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಚಿತ್ರಕ್ಕೆ ಪ್ರಮಾಣಪತ್ರ ನೀಡಿರುವ ಸೆನ್ಸಾರ್ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ಹಲವರು ಕೋರ್ಟ್ ಮೊರೆ ಹೋಗಿದ್ದರು.
‘ದಿ ಕೇರಳ ಸ್ಟೋರಿ 2: ಗೋಸ್ ಬಿಯಂಡ್’ ಚಿತ್ರದ ಟ್ರೇಲರ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ರಾಜಕೀಯ ನಾಯಕರು ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಸಿನಿಮಾ ರಾಜಕೀಯ ಅಜೆಂಡಾವನ್ನು ಒಳಗೊಂಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸಿನಿಮಾವನ್ನು ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಪ್ರಚಾರ ಮಾಡಲು ನಿರ್ಮಿಸಲಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಸಮಾಧಾನ ಹೊರಹಾಕಿದರು.
ಕೇರಳ ಹೈಕೋರ್ಟ್ ಹೇಳಿದ್ದೇನು?
ಇನ್ನು ಕೇರಳ ಸ್ಟೋರಿ 2ಗೆ ಸಂಬಂಧಿಸಿದಂತೆ ಸಲ್ಲಿಕೆ ಮಾಡಲಾಗಿದ್ದ ಅರ್ಜಿಗಳನ್ನು ವಿಚಾರಣೆ ಮಾಡಿದ ಕೇರಳ ಹೈಕೋರ್ಟ್, ಅರ್ಜಿದಾರರ ಪ್ರಾತಿನಿಧ್ಯವನ್ನು ಪರಿಗಣಿಸಿ 2 ವಾರಗಳಲ್ಲಿ ವಿಷಯವನ್ನು ನಿರ್ಧರಿಸಲು ಸಿಬಿಎಫ್ಸಿಗೆ ನಿರ್ದೇಶನ ನೀಡಿದೆ. ಅಲ್ಲದೆ ಫೆಬ್ರವರಿ 27ರ ಶುಕ್ರವಾರ ಬಿಡುಗಡೆಯಾಗಬೇಕಾಗಿದ್ದ ದಿ ಕೇರಳ ಸ್ಟೋರಿ 2 ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿದೇಶಿ ವಿತರಣೆ ಹಕ್ಕುಗಳು ಮಾರಾಟ ಆಗಿವೆ ಎಂದು ಸಿನಿಮಾ ತಂಡವು ಹೈಕೋರ್ಟ್ ಗಮನಕ್ಕೆ ತಂದಿದೆ. ಆದರೆ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ 3 ಅರ್ಜಿಗಳ ವಿಚಾರಣೆ ಬಾಕಿ ಇವೆ. ಎಲ್ಲ ಅರ್ಜಿದಾರರ ವಾದವನ್ನು ಆಲಿಸಬೇಕಿದೆ. ಹೀಗಾಗಿ, ಅಲ್ಲಿಯ ವರೆಗೆ ದಿ ಕೇರಳ ಸ್ಟೋರಿ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.








