ಪುಣೆ: ಬಲಪಂಥೀಯ ಸಿದ್ಧಾಂತವಾದಿ ವಿನಾಯಕ್ ದಾಮೋದರ ಸಾವರ್ಕರ್ ಬ್ರಿಟಿಷರ ಆಡಳಿತಾವಧಿಯಲ್ಲಿ ಸೆಲ್ಯುಲಾರ್ ಜೈಲಿನಲ್ಲಿದ್ದಾಗ ಐದು ಬಾರಿ ಕ್ಷಮಾದಾನ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದು ಸಲ್ಲಿಸಿದ್ದು ಸತ್ಯ ಎಂದು ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹೇಳಿದ್ದಾರೆ ಎಂದು livelaw.in ವರದಿ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ವೇಳೆ ಈ ವಿಷಯ ಬಹಿರಂಗವಾಗಿದೆ. ಲಂಡನ್ ನಲ್ಲಿ ನೀಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಸಾವರ್ಕರ್ ಕುರಿತು ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಈ ದೂರು ದಾಖಲಿಸಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪಾಟಿ ಸವಾಲಿನ ವೇಳೆ ಸತ್ಯಕಿ, “ಸಾವರ್ಕರ್ ಜೈಲಿನಲ್ಲಿದ್ದಾಗ ಐದು ಬಾರಿ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರೆಂಬುದು ನಿಜ. ಸಾವರ್ಕರ್ ಮಾತ್ರವಲ್ಲದೆ ಅನೇಕ ರಾಜಕೀಯ ಕೈದಿಗಳು ಕೂಡ ಬ್ರಿಟಿಷ್ ಸರ್ಕಾರಕ್ಕೆ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದ್ದಾರೆ,” ಎಂದು ಹೇಳಿದ್ದಾರೆ.
ಗೋವಿನ ಕುರಿತು ಸಾವರ್ಕರ್ ಅವರ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ, “ಸಾವರ್ಕರ್ ಎಂದಿಗೂ ಗೋವನ್ನು ದೇವರೆಂದು ಉಲ್ಲೇಖಿಸಿಲ್ಲ. ಗೋವು ಉಪಯುಕ್ತ ಪ್ರಾಣಿ, ದೇವರಲ್ಲ ಎಂಬ ಅಭಿಪ್ರಾಯವನ್ನ ಅವರು ವ್ಯಕ್ತಪಡಿಸಿದ್ದಾರೆ ಎಂಬುದು ನಿಜ,” ಎಂದು ಸತ್ಯಕಿ ಒಪ್ಪಿಕೊಂಡಿದ್ದಾರೆ.








