ಚೆನ್ನೈ: ಶಾರ್ಜಾದಿಂದ ಚೆನ್ನೈಗೆ ಆಗಮಿಸಿದ ಏರ್ ಅರೇಬಿಯಾ ವಿಮಾನವೊಂದು ರನ್ವೇನಲ್ಲಿ ಚಲಿಸುತ್ತಿದ್ದಾಗಲೇ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರವನ್ನು (Emergency Exit) ತೆರೆದು ಹೊರಕ್ಕೆ ಜಿಗಿದ ಘಟನೆ ಇಂದು ಮುಂಜಾನೆ ನಡೆದಿದೆ. ಈ ಅನಿರೀಕ್ಷಿತ ಕೃತ್ಯದಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾಗಿದ್ದರು.
ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ವಿಮಾನವು ಸುಗಮವಾಗಿ ಲ್ಯಾಂಡ್ ಆದ ನಂತರ ಮುಖ್ಯ ರನ್ವೇಯಿಂದ ಟ್ಯಾಕ್ಸಿವೇಗೆ ಪ್ರವೇಶಿಸಿ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಹಠಾತ್ತನೆ ಎದ್ದು ಬಂದ ವ್ಯಕ್ತಿಯೊಬ್ಬ ಎಮರ್ಜೆನ್ಸಿ ಡೋರ್ ತೆರೆದು ಕೆಳಕ್ಕೆ ಜಿಗಿದಿದ್ದಾನೆ. ಅದೃಷ್ಟವಶಾತ್, ವಿಮಾನವು ಅತ್ಯಂತ ಕಡಿಮೆ ವೇಗದಲ್ಲಿದ್ದ ಕಾರಣ ಯಾವುದೇ ಪ್ರಾಣಾಪಾಯ ಅಥವಾ ವಿಮಾನಕ್ಕೆ ಹಾನಿ ಸಂಭವಿಸಿಲ್ಲ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಪ್ರಯಾಣಿಕ ಪ್ರಯಾಣದ ಉದ್ದಕ್ಕೂ ಅಸ್ವಸ್ಥನಾಗಿದ್ದ ಎನ್ನಲಾಗಿದೆ. “ಪ್ರಯಾಣಿಕನಿಗೆ ವಾಂತಿಯಾಗುವ ಅನುಭವವಾಗುತ್ತಿತ್ತು ಮತ್ತು ವಿಮಾನದೊಳಗೆ ಎರಡು ಬಾರಿ ವಾಂತಿ ಮಾಡಿಕೊಂಡಿದ್ದ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಅಸ್ವಸ್ಥತೆಯ ಕಾರಣದಿಂದ ಆತ ಗಾಬರಿಯಾಗಿ ಇಂತಹ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಪೈಲಟ್ ಕೂಡಲೇ ಈ ಬಗ್ಗೆ ಗ್ರೌಂಡ್ ಸೆಕ್ಯೂರಿಟಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದರು. ಸದ್ಯ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರಿಗೆ ಒಪ್ಪಿಸಲಾಗಿದೆ.ಈ ಘಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಂಜಾನೆ 03:23 ರಿಂದ 04:23 ರವರೆಗೆ ಮುಖ್ಯ ರನ್ವೇಯನ್ನು ಮುಚ್ಚಲಾಗಿತ್ತು. ಈ ಸಮಯದಲ್ಲಿ ವಿಮಾನಗಳ ಸಂಚಾರವನ್ನು ಪರ್ಯಾಯ ರನ್ವೇಗೆ ವರ್ಗಾಯಿಸಲಾಗಿತ್ತು. ಹಿನ್ನೆಲೆ ತಿಳಿದುಬಂದಿಲ್ಲವಾದರೂ, ಪ್ರಾಥಮಿಕ ವರದಿಗಳ ಪ್ರಕಾರ ಈತ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ನಿವಾಸಿ ಎನ್ನಲಾಗಿದೆ. ವಿಮಾನಯಾನ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಅಡಿಯಲ್ಲಿ ಪೊಲೀಸರು ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರವು ಸಮಗ್ರ ತನಿಖೆ ಕೈಗೊಂಡಿದೆ.








