ಮಂಡ್ಯ : ಕೇಂದ್ರ ಸರಕಾರ ಜಾರಿಗೊಳಿಸಿರುವ ವಿಬಿ-ಜಿ ರಾಮ್ ಜಿ ಎಂಬ ಹೊಸ ಕಾಯಿದೆಯು ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಿದೆ. ಅತ್ಯಂತ ಪಾರದರ್ಶಕತೆ, ಉತ್ತಮ ಕಾರ್ಮಿಕ ನೀತಿ, ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶವನ್ನು ಇದು ಒಳಗೊಂಡಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ್ ಹೇಳಿದರು.
ಮದ್ದೂರು ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಆಶಯಕ್ಕೆ ಪೂರಕವಾಗಿ, ಎಂಜಿ ನರೇಗಾ ಯೋಜನೆಯ ಹೆಸರನ್ನು ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಎಂದು ಬದಲಿಸಲಾಗಿದೆ. ವಿಕಸಿತವಾಗುತ್ತಿರುವ ಭಾರತದ ಪ್ರಕ್ರಿಯೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯೂ ಸಕ್ರಿಯವಾಗಿ ಇರಬೇಕು ಮತ್ತು ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹೆಸರನ್ನು ಬದಲಾಯಿಸಿದೆ ಎಂದರು.
ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗ ಖಾತರಿ ಸಿಗುತ್ತಿತ್ತು. ಆದರೆ ವಿಬಿ-ಜಿ ರಾಮ್ ಜಿ ಯೋಜನೆಯಡಿ 125 ದಿನಗಳ ಖಾತರಿ ಉದ್ಯೋಗ ಸಿಗಲಿದೆ. ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಲಿದೆ. ನೀರಾವರಿಗೆ ಕೆಲಸಗಳಿಗೆ ಆದ್ಯತೆ, ಗ್ರಾಮೀಣ ರಸ್ತೆ, ಮಾರುಕಟ್ಟೆ, ಪರಿಸರ ರಕ್ಷಣೆ, ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಆದ್ಯತೆ ಸಿಗಲಿದೆ. ಕಾರ್ಮಿಕರಿಗೆ ಸಂಬಳದಲ್ಲಿ ಶೇ. 25ರಷ್ಟು ಹೆಚ್ಚಳವಾಗಲಿದೆ. ಡಿಜಿಟಲ್ ಸಂಬಳ ಪಾವತಿ ಆಗುವುದರಿಂದ ಅಕ್ರಮ, ಸೋರಿಕೆ ಸಮಸ್ಯೆ ಇರುವುದಿಲ್ಲ. ಇದರಿಂದ ಗ್ರಾಮೀಣ ಜನರ ಆದಾಯ ನಿಶ್ಚಿತವಾಗಿ ಹೆಚ್ಚಲಿದೆ. ಗಾಂಧೀಜಿ ಅವರ ಆಶಯಕ್ಕೆ ಇದು ಪೂರಕವಾಗಿದೆ. ರೈತರಿಗೂ, ಕೃಷಿ ಕಾರ್ಮಿಕರು ಇಬ್ಬರಿಗೂ ಅನುಕೂಲಕರವಾಗಲಿದೆ ಎಂದರು.
ಗ್ರಾಮೀಣ ಭಾಗದ ಬಡತನದ ಪ್ರಮಾಣ 2011-12ರಲ್ಲಿ ಶೇ. 25.7ರಷ್ಟು ಇದ್ದರೆ 2023-24ರ ವೇಳೆಗೆ ಶೇ. 4.86ಕ್ಕೆ ಇಳಿದಿದೆ. ಆದ್ದರಿಂದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಪೂರಕವಾಗಿದೆ. ಜಾಬ್ ಕಾರ್ಡ್‌ಗಳ ವ್ಯಾಲಿಡಿಟಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸಲಾಗಿದೆ. ಏಕೆಂದರೆ ಮೃತಪಟ್ಟಿರುವ ಅಥವಾ ಗೈರು ಹಾಜರಾಗಿರುವ ಕಾರ್ಮಿಕರ ಜಾಬ್ ಕಾರ್ಡ್‌ಗಳನ್ನು ಬೇರೆಯವರು ದುರುಪಯೋಗದಂತೆ ತಡೆಯಲಾಗಿದೆ.
ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ, ವೇತನದ ಜತೆಗೆ ಆರ್ಥಿಕ ಪ್ರಗತಿಗೂ ಕಾರಣವಾಗಲಿದೆ. ಸ್ಥಳೀಯವಾಗಿ ಜೀವನೋಪಾಯಕ್ಕೆ ಕೆಲಸ ಸಿಕ್ಕಿದರೆ ನಗರಗಳಿಗೆ, ಪಟ್ಟಣಗಳಿಗೆ ಹಳ್ಳಿಗರ ವಲಸೆಯೂ ಕಡಿಮೆಯಾಗಲಿದ್ದು, ಈ ಮೂಲಕ ಕೆಲಸಗಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲು ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸುವ ಬದಲು ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಸಾಕಷ್ಟು ನಕಲಿ ಜಾಬ್ ಕಾರ್ಡ್ ಗಳು ಇದ್ದವು. ಈ ಎಲ್ಲಾ ಅಕ್ರಮ, ಲೋಪಗಳಿಗೂ ತೆರೆ ಎಳೆಯಲೆಂದೇ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಎಐ ತಂತ್ರಜ್ಞಾನ, ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗದಲ್ಲಿ ಹಣ ಹೊಡೆಯುತ್ತಿದ್ದ ಮಧ್ಯವರ್ತಿಗಳಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಇದರಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಷ್ಟೊಂದು ವ್ಯವಸ್ಥಿತವಾಗಿ ಪಾರದರ್ಶಕತೆ ತರಲಾಗಿದೆ. ಹೀಗಾಗಿ ಕೆಲವರು ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ರವಿ, ಬಿಜೆಪಿ ಮುಖಂಡ ಮಂಜೇಗೌಡ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮಂಡ್ಯ: ಮದ್ದೂರಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ‘ಚೆಸ್ಕಾಂ ನೌಕರ’ರಿಂದ ಪ್ರತಿಭಟನೆ
ಬೆಂಗಳೂರು ಜನತೆ ಗಮನಕ್ಕೆ: ಫೆ.14ರ ಶನಿವಾರದಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








