ಬೆಂಗಳೂರು: ಮುಂಗಾರು ಆಗಮನಕ್ಕೂ ಮುನ್ನ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಶನಿವಾರ ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಪ್ರತ್ಯೇಕ ಅವಘಡಗಳಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಇನ್ನೂ 4 ದಿನಗಳ ಕಾಲ ಮಳೆ ಮುಂದುವರಿಯಲಿದೆ.
ಬಳ್ಳಾರಿ ತಾಲೂಕಿನ ದಾಸರನಾಗೇನಹಳ್ಳಿಯಲ್ಲಿ ಸಪೋಟ ಕೊಯ್ಯಲು ಹೊಲಕ್ಕೆ… ತೆರಳಿದ್ದ ಕೋರಿ ಗಾಡಿಲಿಂಗಪ್ಪ (32) ಎಂಬುವವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಹಸುಗಳನ್ನು ಮನೆಗೆ ಕರೆತರಲು ತೆರಳಿದ್ದ ವಿನೋದಾ (42) ಎಂಬ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಎರಡು ಹಸುಗಳೂ ಸಹ ಸಿಡಿಲಿಗೆ ಬಲಿಯಾಗಿವೆ.
ಚಾಮರಾಜನಗರದ ಬೇಗೂರು, ಎಚ್.ಡಿ. ಕೋಟೆ, ನಂಜನಗೂಡು ಹಾಗೂ ಕೊಳ್ಳೇಗಾಲದಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಶುಕ್ರವಾರ ರಾತ್ರಿ ಮೈಸೂರು ನಗರದಲ್ಲಿ ಮಿಂಚು, ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ನೂರಾರು ಮರಗಳು ಹಾಗೂ ಜಾಹೀರಾತು ಫಲಕಗಳು ನೆಲಕಚ್ಚಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಹಾಸನ, ಬೇಲೂರು, ಚನ್ನರಾಯಪಟ್ಟಣ ಹಾಗೂ ಹಳೇಬೀಡಿನಲ್ಲಿ ಜೋರು ಮಳೆಯಾಗಿದೆ. ಹಿರೀಸಾವೆ ಹೋಬಳಿಯ ಗಡಿ ಭಾಗದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಹಲವಾರು… ತೆಂಗಿನ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಸನಗರ ತಾಲೂಕಿನ… ರಿಪ್ಪನ್ಪೇಟೆ ಹಾಗೂ ತೀರ್ಥಹಳ್ಳಿಯಲ್ಲಿ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು ನಗರ, ಆಲೂರು, ಕಡೂರು ತಾಲೂಕುಗಳಲ್ಲಿ ಧಾರಾಕಾರ ಗಾಳಿ-ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ರಸ್ತೆಯ ಕೆಳಗೂರು ಬಳಿ ಬೃಹದಾಕಾರದ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು.
ಮಳೆ ಹಾಗೂ ಬಿರುಗಾಳಿಯ ಆರ್ಭಟಕ್ಕೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ 20 ಎಕರೆ ಹಾಗೂ ಜಗಳೂರು ತಾಲೂಕಿನಲ್ಲಿ 3 ಎಕರೆ ಬೆಳೆ ಹಾನಿಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 63 ಅಡಿಕೆ ಮರ ಹಾಗೂ 12 ತೆಂಗಿನ ಮರಗಳಿಗೆ ಹಾನಿಯಾಗಿದೆ. ಹರಿಹರ ತಾಲೂಕಿನ ಚಿಕ್ಕಬಿದರಿಯಲ್ಲಿ ಮನೆಯೊಂದರ ಶೀಟ್ ಗಾಳಿಗೆ ಹಾರಿಹೋಗಿದೆ.
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತ ಕಂಡಿದ್ದು, ಮುಂಬರುವ 4 ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.








