ಬೆಂಗಳೂರು : ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್ ನಾಪತ್ತೆ ಆರೋಪ ಪ್ರಕರಣದ ಬಗ್ಗೆ ಖುದ್ದು ಗೃಹ ಸಚಿವ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ರು. ಈ ಪ್ರಕರಣದಲ್ಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಚಿನ್ನ ಕಳವು ಸಂಬಂಧ ಸಿಸಿಟಿವಿ ಆಧರಿಸಿ ಡಿ ದರ್ಜೆ ನೌಕರನನ್ನು ಬಂಧಿಸಲಾಗಿದೆ. ವಿಧಾನಸೌಧದ ಗೇಟ್ನಿಂದ ಒಳಗೆ ಹೋಗಿದ್ದೇಗೆ? ಯಾವ ಗೇಟ್ನಿಂದ ಒಳಗೆ ಹೋಯ್ತು? ಅದರಲ್ಲಿಯೂ ಸಚಿವರ ಕಚೇರಿಗೆ ಬ್ಯಾಗ್ ಹೋಗುತ್ತೆ ಅಂದ್ರೆ ಪತ್ತೆ ಹಚ್ಚಬೇಕಲ್ವಾ? ಹೀಗಾಗಿ ತನಿಖೆಗೆ ಆದೇಶಿಸಲಾಗಿದ್ದು, ಇಂದು ಅಥವಾ ನಾಳೆ ವರದಿ ಕೈ ಸೇರಲಿದೆ. ಆ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಬೈರತಿ ಬಸವರಾಜ್ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಲೆ ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರಾಗಿಯೇ ಬಂದು ಸರೆಂಡರ್ ಆದರೆ ಒಳ್ಳೆಯದು. ಇಲ್ಲವಾದ್ರೆ ಪೊಲೀಸರು ಬಂಧಿಸಲು ಶೋಧ ನಡೆಸುತ್ತಾರೆ ಎಂದು ಹೇಳಿದರು.








