ಮುಂಬೈ:ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ 2026ರ ನೀಟ್ (NEET-UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ಮತ್ತಷ್ಟು ಚುರುಕುಗೊಳಿಸಿದೆ. ಹಗರಣದ ಬೇರುಗಳನ್ನು ಹುಡುಕುತ್ತಾ ಹೊರಟಿರುವ ಸಿಬಿಐ ಅಧಿಕಾರಿಗಳ ತಂಡ, ಈಗ ಮಹಾರಾಷ್ಟ್ರದ ನಾಂದೇಡ್ (Nanded) ನಗರದ ಹಲವು ಪ್ರಮುಖ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ಧಾಳಿ ಮುಂದುವರಿಸಿದೆ.
ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಪೇಪರ್ ಲೀಕ್ ಮಾಫಿಯಾದ ಪ್ರಮುಖ ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ, ಈ ಜಾಲವು ಮಹಾರಾಷ್ಟ್ರಕ್ಕೂ ವ್ಯಾಪಿಸಿರುವ ಬಲವಾದ ಸುಳಿವು ಸಿಬಿಐಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ನಾಂದೇಡ್‌ನಲ್ಲಿರುವ ಕೆಲವು ಖಾಸಗಿ ಕೋಚಿಂಗ್ ಸೆಂಟರ್‌ಗಳು, ಶಿಕ್ಷಕರು ಮತ್ತು ಶಂಕಿತ ಮಧ್ಯವರ್ತಿಗಳ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಈ ಹಿಂದೆ ಮಹಾರಾಷ್ಟ್ರದ ಲಾತೂರ್ ಮತ್ತು ನಾಂದೇಡ್ ಭಾಗದ ಕೆಲವು ಶಿಕ್ಷಕರು ವಿದ್ಯಾರ್ಥಿಗಳಿಂದ ಹಣ ಪಡೆದು ಪತ್ರಿಕೆ ಸೋರಿಕೆ ಜಾಲದೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಹಲವು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ ವಿದ್ಯಾರ್ಥಿಗಳ ಪ್ರವೇಶ ಪತ್ರ (Admit Cards) ಮತ್ತು ಬ್ಯಾಂಕ್ ಚೆಕ್‌ಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.ಕೋಚಿಂಗ್ ಕ್ಲಾಸ್ ನಡೆಸುವ ಪ್ರಮುಖ ವ್ಯಕ್ತಿಗಳನ್ನು ಹಾಗೂ ಪರೀಕ್ಷಾ ಕೇಂದ್ರಗಳ ಕೆಲವು ಸಿಬ್ಬಂದಿಯನ್ನು ಸಿಬಿಐ ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದೆ.








