ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದ್ದು. ಕುಖ್ಯಾತ ರೌಡಿಶೀಟರ್ ನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಯತ್ನಿಸಿದ ಪರಿಣಾಮ, ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದಿದೆ.
ಗುಂಡೇಟಿಗೆ ಒಳಗಾದ ಆರೋಪಿ ಜೀವ (19) ಎಂದು ಗುರುತಿಸಲಾಗಿದ್ದು, ಆತನ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಆರೋಪಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಪಾಳ್ಯ ನಿವಾಸಿಯಾಗಿರುವ ಜೀವ, ಕೊಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಕಳೆದ ವಾರ ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ನಡೆದ ದರೋಡೆ ಪ್ರಕರಣಗಳಲ್ಲಿಯೂ ಆತನ ಪಾತ್ರವಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು.ಖಚಿತ ಮಾಹಿತಿ ಆಧರಿಸಿ ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ, ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿ ನಾಗೇಶ್ ಅವರ ಮೇಲೆ ಜೀವ ಮಾರಕಾಸ್ತ್ರಗಳಿಂದ ದಾಳಿ ಮಾಡಲು ಮುಂದಾಗಿದ್ದಾನೆ. ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆ ಕಂಡುಬಂದ ಹಿನ್ನೆಲೆ, ಸಬ್ ಇನ್ಸ್ಪೆಕ್ಟರ್ ಅಯ್ಯಪ್ಪ ಎಚ್ಚರಿಕೆಯ ಕ್ರಮವಾಗಿ ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಆರೋಪಿ ಜೀವನ ಕಾಲಿಗೆ ಗುಂಡು ತಗುಲಿ ಆತ ಗಾಯಗೊಂಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣ ದಾಖಲು
ಈ ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ನಗರದ ಭದ್ರತೆ ದೃಷ್ಟಿಯಿಂದ ಕುಖ್ಯಾತ ಅಪರಾಧಿಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿದೆ.








