ಸಿ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸದಾ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ನಟನೆಯಿಂದ ರಾಜಕೀಯಕ್ಕೆ ಪ್ರವೇಶಿಸಿರುವ ಇವರು, ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಚೊಚ್ಚಲ ಪ್ರದರ್ಶನಕ್ಕೆ ಮುಕುಟ ಪ್ರಾಯ ಎಂಬಂತೆ ಮೇ 10 ರಂದು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಒಂದೆಡೆ ವಿಜಯ್ ಅವರ ಜನಪ್ರಿಯತೆ ಹೊಸ ಎತ್ತರಕ್ಕೆ ತಲುಪಿದ್ದರೆ, ಮತ್ತೊಂದೆಡೆ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇತ್ತೀಚೆಗೆ ಡಿಎಂಕೆ (DMK) ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿರುವುದು ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಈ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಭಾನುವಾರ ಬಲವಾದ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು ಹೇಳಿದ್ದೇನು ಎಂಬುದನ್ನು ಇಲ್ಲಿ ಓದಿ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಬಗ್ಗೆ ತಮಗೆ ಯಾವುದೇ “ಅಸೂಯೆ” (ಮತ್ಸರ) ಇಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಭಾನುವಾರ ಸ್ಪಷ್ಟವಾಗಿ ಹೇಳಿದರು. ಅಷ್ಟೇ ಅಲ್ಲದೆ, ಇತ್ತೀಚೆಗೆ ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಅವರೊಂದಿಗೆ ನಡೆಸಿದ ಭೇಟಿಯು “ಕೇವಲ” ಸೌಹಾರ್ದಯುತ ಭೇಟಿಯಾಗಿದ್ದು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ಜನಪ್ರಿಯ ನಟ ಸ್ಪಷ್ಟಪಡಿಸಿದ್ದಾರೆ.
ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ವರದಿಗಳಿಗೆ ಪ್ರತಿಕ್ರಿಯಿಸುತ್ತಾ, ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಅವರೊಂದಿಗಿನ ಭೇಟಿಯು ವಿಜಯ್ ಅವರ ಮುಖ್ಯಮಂತ್ರಿ ಆಕಾಂಕ್ಷೆಗಳಿಗೆ ಅಡ್ಡಿಪಡಿಸುವ ಅಥವಾ ರಾಜಕೀಯ ಪಕ್ಷಗಳನ್ನು ವಿಲೀನಗೊಳಿಸುವ ಪ್ರಯತ್ನವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಪಿಟಿಐ (PTI) ಸುದ್ದಿ ಸಂಸ್ಥೆ ವರದಿ ಮಾಡಿದೆ.
”ಮಾಧ್ಯಮದವರು ಹಠಾತ್ತನೆ ನನ್ನನ್ನು ವಿಜಯ್ ಬಗ್ಗೆ ಕೇಳಿದಾಗ ನನಗೆ ಆಘಾತವಾಯಿತು. ಅವರ ಸಾಧನೆ ನನಗೆ ಆಶ್ಚರ್ಯ ಮೂಡಿಸಿದೆ ಮತ್ತು ಅವರ ಬಗ್ಗೆ ನನಗೆ ಸಂತೋಷವಿದೆಯೇ ಹೊರತು ಅಸೂಯೆಯಲ್ಲ,” ಎಂದು ನಟ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಅವರು, ಇಷ್ಟು ಸಣ್ಣ ವಯಸ್ಸಿನಲ್ಲೇ ಎನ್.ಟಿ.ಆರ್ (NTR) ಅವರಿಗಿಂತಲೂ ಹೆಚ್ಚಿನದನ್ನು ಸಾಧಿಸಲಿ ಎಂದು ಸಿಎಂ ವಿಜಯ್ ಅವರಿಗೆ ಶುಭ ಹಾರೈಸಿದ್ದಾರೆ.








