ಬೆಳಗಾವಿ : ಬೆಳಗಾವಿಯಲ್ಲಿ ಒಬ್ಬ ವ್ಯಕ್ತಿ ವೈದ್ಯ ಲೋಕಕ್ಕೆ ಸವಾಲಾಗಿದ್ದಾನೆ. ಮೇಕೆಯಂತೆ ಬರೀ ಸೊಪ್ಪು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ. ನಿತ್ಯವೂ ಈತನಿಗೆ ಗಿಡಗಳ ಹಸಿ ಸೊಪ್ಪೆ ಆಹಾರವಾಗಿದೆ. ಬುಡನ್ ಖಾನ್ ಹೊಸಮನಿ ಎಂಬ ಈ ಯುವಕ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ನಿವಾಸಿಯಾಗಿದ್ದಾನೆ.
ಗ್ರಾಮದ ಹೊರವಲಯದ ಹೆಗ್ಗೊಳ್ಳ ಗುಡ್ಡದಲ್ಲಿ ಬರೀ ಹಸಿ ಸೊಪ್ಪು ಎಲೆ ತಿಂದು ಕಳೆದ ಹತ್ತು ವರ್ಷಗಳಿಂದ ಬದುಕುತ್ತಿದ್ದಾನೆ. ಸಾಮಾನ್ಯ ಮನುಷ್ಯರಂತೆ ಸೇವಿಸುವ ಊಟ, ತಿಂಡಿ ಎಲ್ಲ ಬಿಟ್ಟು ಗಿಡದ ತಪ್ಪಲು ಹಸಿ ಸೊಪ್ಪು ಸೇವಿಸಿ ಬದುಕುತ್ತಿದ್ದಾನೆ. ನನಗೆ ಇಲ್ಲಿಯವರೆಗೆ ಯಾವುದೇ ಕಾಯಿಲೆ ಬಂದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾನೆ.
ನಾನು ಕಾಡಿನಲ್ಲಿ ಇದ್ದಾಗ ಕೋತಿ ಯಾವ ರೀತಿ ಸೊಪ್ಪು ಎಲೆ ತಿನ್ನುತ್ತೋ ಅದನ್ನು ನೋಡಿ ನಾನು ತಿನ್ನಲು ಕಲಿತೆ. ನನಗೆ ಆಗ ಅದು ಬಹಳ ರುಚಿ ಎನಿಸಿತು. ಹಾಗಾಗಿ ನಾನು ಊಟ ತಿಂಡಿ ಎಲ್ಲವನ್ನು ಬಿಟ್ಟು ಎಲೆ, ಸೊಪ್ಪು ತಿಂದು ಒಬ್ಬನೇ ಜೀವಿಸುತ್ತಿದ್ದೇನೆ. ಇಲ್ಲಿ 150ಕ್ಕೂ ಹೆಚ್ಚು ಮರ ಗಿಡಗಳ ತಪ್ಪಲು ಇದ್ದು, ಎಲ್ಲ ತಪ್ಪಲು ತಿನ್ನುತ್ತೇನೆ ನನಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ ಇದುವರೆಗೂ ಆಸ್ಪತ್ರೆಗೆ ಹೋಗಿಲ್ಲ ಎಂದಿದ್ದಾನೆ.








