ಬೆಂಗಳೂರು : “ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಸೇರಿ ಅಂದಾಜು 2 ಸಾವಿರ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ” ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ವಿಟಿಯು ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ – 186, ಪಾಲಿಟೆಕ್ನಿಕ್‍ನಲ್ಲಿ 941, ಕಾಲೇಜು ಶಿಕ್ಷಣ ಇಲಾಖೆಯಲ್ಲಿ 826, ಯುವಿಸಿಇನಲ್ಲಿ 79 ಸೇರಿದಂತೆ ಅಂದಾಜು 2 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು. ಆ ಮೂಲಕ ಉನ್ನತ ಶಿಕ್ಷಣ ಇಲಾಖೆಯಲ್ಲಿರುವ ನೌಕರರ ಕೊರತೆಯನ್ನು ನೀಗಿಸಲಾಗುವುದು ಎಂದರು. ವಿಟಿಯು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಇದಕ್ಕಾಗಿ ಏಷ್ಯನ್ ಡೆವಲೆಪ್‍ಮೆಂಟ್ ಬ್ಯಾಂಕ್‍ನಿಂದಾಗಿ ಸೆಂಟರ್ ಆಪ್ ಎಕ್ಸಲೆನ್ಸ್ ಆರಂಭಿಸುತ್ತಿದ್ದೇವೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಸ್. ವಿದ್ಯಾಶಂಕರ್ ಅವರು ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂತ್ರಜ್ಞಾನ ಅಳವಡಿಕೊಳ್ಳುವಲ್ಲಿ ಮುಂದಿದೆ. ಇದಕ್ಕಾಗಿ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. 83 ಸಾವಿರ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳ ಪ್ರದರ್ಶನಕ್ಕಾಗಿ ನಾವು ಈ ತಿಂಗಳು ಓಪನ್ ಡೇ ಮಾಡುತ್ತಿದ್ದೇವೆ. ಉತ್ತಮ ಪ್ಲೇಸ್ ಮೆಂಟ್ ಅನ್ನು ವಿಟಿಯು ನೀಡುತ್ತಿದೆ. 4 ಸಾವಿರ ಇಂಡಸ್ಟ್ರಿ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳ ಸರ್ವೋತಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಅನಿಸಿಕೆ:
ನಾನು ಚಿನ್ನದ ಪದಕವನ್ನು ನೀರಿಕ್ಷೆ ಮಾಡಿದ್ದೆ. ಏಕೆಂದರೆ, ನಾನು 2023ರಲ್ಲಿ ಪದವಿಯಲ್ಲಿ ವಿಟಿಯು ಚಿನ್ನದ ಪದಕ ಪ್ರದಾನ ಮಾಡಿತ್ತು. ಇದೀಗ ಅದೇ ವಿಟಿಯುನಿಂದ ಎರಡನೇ ಬಾರಿಗೆ ಚಿನ್ನದ ಪದಕ ಪಡೆಯಲು ನಾನು ಉತ್ಸುಕಳಾಗಿದ್ದೇನೆ. ನಾನು ಮೂಲತಃ ಭದ್ರಾವತಿಯವಳು. ತಂದೆ ಕೃಷಿಕರು. ತಾಯಿ ಫಾರ್ಮಸಿ ನಡೆಸುತ್ತಾರೆ. ನನಗೆ ಟಿಸಿಎಸ್ ನಲ್ಲಿ ಉದ್ಯೋಗ ಸಿಕ್ಕಿದೆ. ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದೆ. ಇದೀಗ ಸಿಕ್ಕಿದೆ. ತಕ್ಷಣ ನಾನು ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದು ಶಿವಮೊಗ್ಗ ಜವಹರಲಾಲ್ ನೆಹರು ನ್ಯಾಷನಲ್ ಕಾಲೇಜಿನ ಎಂಬಿಎ ನಲ್ಲಿ 4 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಪಾರ್ವತಿ ಸಲೇರಾ ತಿಳಿಸಿದರು.
ಪಿಎಚ್.ಡಿ ಮಾಡಬೇಕೆಂದು ಕೊಂಡಿದ್ದೇನೆ. ನಮ್ಮ ಊರು ಮೂಲತಃ ಮಾಗಡಿಯ ತಾವರೆಕರೆ. ತಂದೆ ಕೃಷಿಕರು. ತಾಯಿ ಗೃಹಿಣಿ. ನಾನು ಪದವಿಯಲ್ಲೂ ಮೊದಲ ರ್ಯಾಂಕ್ ಗಳಿಸಿದ್ದೆ. ಇಲ್ಲಿ ಹೆಚ್ಚಿನ ಅಂಕ ಬಂದಿದ್ದು, ಚಿನ್ನದ ಪದಕ ಸಿಕ್ಕಿರುವುದು ಖುಷಿ ತಂದಿದೆ. ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಇದೆ. ಹೀಗಾಗಿ ಇದೇ ಕ್ಷೇತ್ರದಲ್ಲಿ ಮುಂದುವರಿಸುವ ಆಸಕ್ತಿ ಇದೆ ಎಂದು ಬೆಂಗಳೂರು ಆರ್‍ಎನ್‍ಎಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಸಿಎ ನಲ್ಲಿ 3 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಎಚ್.ಸಿ. ಕಾವ್ಯ ತಿಳಿಸಿದರು.
ವಿಟಿಯು ಘಟಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವಿಟಿಯಿಂದ ಚಿನ್ನದ ಪದಕ ಪಡೆಯುವುದಕ್ಕೆ ನನಗೆ ಖುಷಿಯಾಗುತ್ತಿದೆ. ಸದ್ಯ ನಾನು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮದು ಮೂಲತಃ ದಾವಣಗೆರೆ. ಪಾಲಕರಿಬ್ಬರೂ ಸರಕಾರಿ ನೌಕರಿಯಲ್ಲಿರುವುದರಿಂದ ನನಗೂ ಸರಕಾರಿ ಉದ್ಯೋಗ ಪಡೆಯಬೇಕೆಂಬ ಆಸೆ ಇದೆ. ಇದಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಎಂ.ಟೆಕ್ ನಲ್ಲಿ 3 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಬಿ.ಎಸ್.ಸಂಚಿತಾ ತಿಳಿಸಿದರು.
ನಾನು ರ್ಯಾಂಕ್ ನಿರೀಕ್ಷೆ ಮಾಡಿದ್ದೆ. ಆದರೆ, ಚಿನ್ನದ ಪದಕ ಸಿಗುವ ಬಗ್ಗೆ ಆಲೋಚನೆ ಇರಲಿಲ್ಲ. ಚಿನ್ನದ ಪದಕ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನನ್ನ ಊರು ಕುಣಿಗಲ್. ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡು ಬದುಕು ರೂಪಿಸಿಕೊಳ್ಳಬೇಕೆಂದು ಕೊಂಡಿದ್ದೇನೆ ಎಂದು ಬೆಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂ.ಟೆಕ್ ನಲ್ಲಿ 2 ಚಿನ್ನದ ಪದಕ ಪಡೆದ ವಿದ್ಯಾರ್ಥಿ ವಿ.ಯೋಗೇಶ್ ಗೌಡ ತಿಳಿಸಿದರು.
ನಾನು ಪದವಿ ಮುಗಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಆನಂತರ ಎಂ.ಟೆಕ್ ಮಾಡಿದೆ. ನಾನು ಮೂಲತಃ ಬಳ್ಳಾರಿ ಜಿಲ್ಲೆಯವನು. ಬೇರೆ ಕೆಲಸ ಹುಡುಕುತಿದ್ದೇನೆ. ತಂದೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದರಿಂದ ನಾನು ಅವರಂತೆ ಎಂಜಿನಿಯರಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡೆ ಎಂದು ಬಳ್ಳಾರಿ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಎಂ.ಟೆಕ್ ನಲ್ಲಿ 2 ಚಿನ್ನದ ಪದಕ ಪಡೆದ ವಿದ್ಯಾರ್ಥಿ ಬಿ.ರಾಹುಲ್ ಡೇವಿಡ್ ತಿಳಿಸಿದರು.








