ಬೆಂಗಳೂರು: ಏಪ್ರಿಲ್ 30, 2026 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ವರ್ಗಗಳ ಕಲ್ಯಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಭೆಯ ವಿವರಗಳನ್ನು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದು, ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಸಾರಿಗೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಕಿಟ್
ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಮಹತ್ವದ ನೆರವನ್ನು ಘೋಷಿಸಿದೆ. ಒಂದರಿಂದ ಹನ್ನೆರಡನೇ ತರಗತಿಯಲ್ಲಿ ಓದುತ್ತಿರುವ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಒಳಗೊಂಡ ಶೈಕ್ಷಣಿಕ ಕಿಟ್ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ. ತಲಾ 8,600 ರೂಪಾಯಿ ಮೌಲ್ಯದ ಈ ಕಿಟ್‌ಗಳ ವಿತರಣೆಗಾಗಿ ಸರ್ಕಾರ ಒಟ್ಟು 115.84 ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಡಲು ಅನುಮೋದನೆ ನೀಡಿದೆ.
ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ.
ಅಲ್ಪಸಂಖ್ಯಾತ ಸಮುದಾಯದ ಮುನಿಸು ತಣಿಸುವ ನಿಟ್ಟಿನಲ್ಲಿ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳು ಹಾಗೂ ಕೇರಿಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಈ ಉದ್ದೇಶಕ್ಕಾಗಿ 600 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಸರ್ಕಾರದ ಸಮ್ಮತಿ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಸಾರಿಗೆ ವಲಯಕ್ಕೆ ಮಹತ್ವದ ಕೊಡುಗೆ: ಹೈಸ್ಪೀಡ್ ರೈಲು ಮತ್ತು ವಿಮಾನಯಾನ
ಸಾರಿಗೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಹೈದರಾಬಾದ್-ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಒಟ್ಟು 607 ಕಿಲೋಮೀಟರ್ ಉದ್ದದ ಈ ಕಾರಿಡಾರ್‌ನಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ 15 ನಿಲ್ದಾಣಗಳು ಬರಲಿವೆ.
ಇದರ ಜೊತೆಗೆ, ರಾಜ್ಯದ ಪ್ರಾದೇಶಿಕ ವಿಮಾನಯಾನ ಸೇವೆಗಳನ್ನು ಉತ್ತೇಜಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು-ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಕಲಬುರಗಿ-ಬೆಂಗಳೂರು ಮಾರ್ಗಗಳಲ್ಲಿ ವಿಮಾನ ಸೇವೆಗಳನ್ನು ನಡೆಸಲು ವಾರ್ಷಿಕ 28.47 ಕೋಟಿ ರೂಪಾಯಿಗಳನ್ನು ವಿಜಿಎಫ್ (VGF) ರೂಪದಲ್ಲಿ ಪ್ರೋತ್ಸಾಹ ಧನವಾಗಿ ಒದಗಿಸಲು ಸಚಿವ ಸಂಪುಟ ನಿರ್ಣಯಿಸಿದೆ.








