ಬೆಂಗಳೂರು: ಏಪ್ರಿಲ್ 30, 2026 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 20 ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿ, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಭೆಯ ನಂತರ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮುಖ ನಿರ್ಧಾರಗಳ ಕುರಿತು ಮಾಹಿತಿ ನೀಡಿದ್ದಾರೆ.
1. ಗ್ರೇಟರ್ ಬೆಂಗಳೂರು ಟೌನ್ ಶಿಪ್ ಯೋಜನೆಗೆ ಅನುಮೋದನೆ
ಸಚಿವ ಸಂಪುಟವು ರಾಮನಗರದ ಬಿಡದಿ ಬಳಿ ಬೃಹತ್ ‘ಗ್ರೇಟರ್ ಬೆಂಗಳೂರು ಟೌನ್ ಶಿಪ್’ (Greater Bengaluru Township) ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ.
-
ಅಂದಾಜು ವೆಚ್ಚ: 18,104 ಕೋಟಿ ರೂ. ಯೋಜನೆಗೆ ಸಮ್ಮತಿ.
-
ವಿಸ್ತೀರ್ಣ: 9 ಗ್ರಾಮಗಳ 7,400 ಎಕರೆ ಪ್ರದೇಶದಲ್ಲಿ ನಿರ್ಮಾಣ.
-
ಆರ್ಥಿಕತೆ: 7,500 ಕೋಟಿ ರೂ. ಬ್ಯಾಂಕ್ ಗ್ಯಾರೆಂಟಿ ನೀಡಲು ನಿರ್ಧಾರ.
-
ಪರಿಹಾರ: 2013ರ ಭೂಸ್ವಾಧೀನ ಕಾಯ್ದೆಯನ್ವಯ ಪರಿಹಾರ ನೀಡಲಾಗುತ್ತದೆ. ಜಮೀನು ಕಳೆದುಕೊಂಡ ರೈತರಿಗೆ 9,600 ಚದರಡಿಯ ಅಭಿವೃದ್ಧಿಪಡಿಸಿದ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ.
2. ದಲಿತ ಒಳ ಮೀಸಲಾತಿ ಜಾರಿ ಕುರಿತು
ಸಂಪುಟ ಸಭೆಯಲ್ಲಿ ದಲಿತ ಒಳ ಮೀಸಲಾತಿ ಜಾರಿ ಕುರಿತಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
-
ಒಳ ಮೀಸಲಾತಿ ರೋಸ್ಟರ್ ಬಿಂದುವನ್ನು ನಿಗದಿಪಡಿಸಲಾಗಿದ್ದು, 400 ರೋಸ್ಟರ್ ಬಿಂದುಗಳನ್ನು ಮಾರ್ಪಡಿಸಲು ತೀರ್ಮಾನಿಸಲಾಗಿದೆ.
-
ಶೇ 15ರಷ್ಟು ಮೀಸಲಾತಿಯನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದೆ.
-
ಪ್ರವರ್ಗ ‘ಸಿ’ ಗೆ ಶೇ 20ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ.
-
ಮೀಸಲಾತಿ 3ಕ್ಕಿಂತ ಕಡಿಮೆ ಇರುವುದನ್ನು ಸಾಮಾನ್ಯ ಹುದ್ದೆ ಎಂದು ಪರಿಗಣಿಸಲಾಗುವುದು.
-
ಈ ಸಂಬಂಧ ಸರ್ಕಾರ ಹೊರಡಿಸಿದ್ದ ಹಿಂದಿನ ಆದೇಶವನ್ನು ಹಿಂಪಡೆಯಲಾಗಿದ್ದು, ಶೀಘ್ರವೇ ಹೊಸ ನೇಮಕಾತಿ ಆದೇಶ ಹೊರಡಿಸಲಾಗುವುದು.
3. ರಾಜ್ಯ ಶಿಕ್ಷಣ ನೀತಿ (SEP) ಹಾಗೂ ಇತರ ಪ್ರಮುಖ ವಿಚಾರಗಳು
-
ರಾಜ್ಯ ಶಿಕ್ಷಣ ನೀತಿ (SEP): ರಾಜ್ಯ ಶಿಕ್ಷಣ ನೀತಿ ಆಯೋಗವು ಸಲ್ಲಿಸಿರುವ ಅಂತಿಮ ವರದಿಯ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ವರದಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿರುವುದರಿಂದ ಅದನ್ನು ಒದಗಿಸುವಂತೆ ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು.
-
ಸೌಜನ್ಯ ಕೇಸ್: ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಗಮನಿಸಲಾಗಿದ್ದು, ಅದಕ್ಕೆ ಅನುಗುಣವಾಗಿ ಪರಿಶೀಲನೆ ನಡೆಸಲಾಗುವುದು.
4. ಸಚಿವ ಡಿ. ಸುಧಾಕರ್ ಅವರ ಆರೋಗ್ಯದ ಕುರಿತು ಚರ್ಚೆ
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಚಿವ ಡಿ. ಸುಧಾಕರ್ ಅವರ ಚಿಕಿತ್ಸೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಈ ವಿಚಾರದಲ್ಲಿ ಸರ್ಕಾರದ ಮಧ್ಯಪ್ರವೇಶ ಬೇಡ. ವೆಂಟಿಲೇಶನ್ ತೆಗೆಯುವ ಬಗ್ಗೆ ಅವರ ಕುಟುಂಬದವರೇ ನಿರ್ಧರಿಸಲಿ. ಅವರು ಒಪ್ಪಿದ ದಿನದಂದು ಸೂಕ್ತ ತೀರ್ಮಾನ ಕೈಗೊಳ್ಳಲಿ, ನಾವು ಕುಟುಂಬದವರ ತೀರ್ಮಾನಕ್ಕೆ ಬದ್ಧರಾಗಿರೋಣ” ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
5. ಇತರೆ ಮಹತ್ವದ ನಿರ್ಧಾರಗಳು
-
ಹೊಸ ಮಾರುಕಟ್ಟೆ ಸ್ಥಾಪನೆ: ದಾಸನಪುರದ ಬಳಿ ಇರುವ ಮತ್ತಹಳ್ಳಿ ಗ್ರಾಮದ ಸರ್ವೆ ನಂ. 41ರಲ್ಲಿ ಹೊಸ ಸ್ಯಾಟಲೈಟ್ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಅದನ್ನು ಎಪಿಎಂಸಿಗೆ (APMC) ಹಸ್ತಾಂತರಿಸಲಾಗುವುದು.
-
ತಿರುಮಲ ಅತಿಥಿಗೃಹಗಳ ನಿರ್ವಹಣೆ: ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕದ ಅತಿಥಿಗೃಹಗಳ (ಛತ್ರಗಳು) ಕೊಠಡಿಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (KSTDC) ವಹಿಸಲಾಗಿದೆ.
BREAKING: ಸಾಗರದಲ್ಲಿ ಅಣುಸ್ಥಾವರ ಸ್ಥಾಪನೆ ಯೋಜನೆ ಕೈಬಿಡುವಂತೆ ಸಿಎಂ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ
GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ








