ಹೈದರಾಬಾದ್: ಹೈದರಾಬಾದ್ ಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನಕ್ಕೆ ಭಾರತದಲ್ಲಿ ಇಳಿಯಲು ಅನುಮತಿ ನೀಡಲಾಗಿಲ್ಲ ಎಂದು ಪ್ರಯಾಣಿಕರಿಗೆ ತಿಳಿಸಿದ್ದರಿಂದ ವಿಮಾನವನ್ನು ಯು-ಟರ್ನ್ ಮಾಡಿ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ಮರಳಿ ಲ್ಯಾಂಡ್ ಮಾಡಲಾಗಿದೆ.
ಎಲ್ಎಚ್ 752 ವಿಮಾನವು ಭಾನುವಾರ ಸ್ಥಳೀಯ ಸಮಯ 14.14 ರ ಸುಮಾರಿಗೆ ಜರ್ಮನಿಯಿಂದ ಹೊರಟು ಸೋಮವಾರ ಮುಂಜಾನೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.
ಸೋಮವಾರ ಬೆಳಿಗ್ಗೆ ತಮ್ಮ ವಿಮಾನವನ್ನು ಮರು ನಿಗದಿಪಡಿಸಿದ್ದರಿಂದ ಅವರಿಗೆ ರಾತ್ರಿಯಿಡೀ ವಸತಿ ಸೌಕರ್ಯವನ್ನು ಒದಗಿಸಲಾಗುತ್ತಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಿಂದ ಪಿಟಿಐಗೆ ತಿಳಿಸಿದ್ದಾರೆ.
“ನಾವು ಸುಮಾರು 15 ನಿಮಿಷಗಳ ಹಿಂದೆ ಫ್ರಾಂಕ್ಫರ್ಟ್ನಲ್ಲಿ ಇಳಿದಿದ್ದೇವೆ ಮತ್ತು ಹೈದರಾಬಾದ್ ಅಲ್ಲಿ ವಿಮಾನವನ್ನು ಇಳಿಸಲು ಅನುಮತಿ ನೀಡಿಲ್ಲ ಎಂದು ನಮಗೆ ತಿಳಿಸಲಾಯಿತು” ಎಂದು ಯುಎಸ್ನಿಂದ ಹೈದರಾಬಾದ್ನಲ್ಲಿರುವ ತನ್ನ ತಾಯಿಯನ್ನು ಭೇಟಿ ಮಾಡಲು ತೆರಳುತ್ತಿದ್ದ ಮಹಿಳಾ ಪ್ರಯಾಣಿಕ ಹೇಳಿದರು.
“ಇದು ಸುಗಮ ಹಾರಾಟವಾಗಿತ್ತು ಮತ್ತು ಗಾಳಿಯಲ್ಲಿ ಸುಮಾರು ಎರಡು ಗಂಟೆಗಳ ನಂತರ, ನಾವು ಫ್ರಾಂಕ್ಫರ್ಟ್ಗೆ ಮರಳುತ್ತೇವೆ ಎಂದು ನಮಗೆ ತಿಳಿಸಲಾಯಿತು. ಈಗ ವಿಮಾನ ನಿಲ್ದಾಣದಲ್ಲಿ, ಅವರು ನಮಗೆ ರಾತ್ರಿ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದಾರೆ ಮತ್ತು ನಾಳೆ ಬೆಳಿಗ್ಗೆ 10 ಗಂಟೆಗೆ ಅದೇ ವಿಮಾನದಲ್ಲಿ ಹೊರಡುತ್ತೇವೆ ಎಂದು ನಮಗೆ ತಿಳಿಸಿದ್ದಾರೆ” ಎಂದು ಅವರು ಹೇಳಿದರು