ಬೆಂಗಳೂರು : ಓಲಾ, ಊಬರ್ ರ್ಯಾಪಿಡೋ ಬೈಕ್ ಟ್ಯಾಕ್ಸಿ ಗಳಿಗೆ ಹೈಕೋರ್ಟ್ ಶಾಕ್ ನೀಡಿದ್ದು, ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಮಧ್ಯಂತರ ಅನುಮತಿಗೆ ಹೈಕೋರ್ಟ್ ನಿರಾಕರಿಸಿದೆ. ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಜೂನ್ 24ಕ್ಕೆ ನಿಗದಿಪಡಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಎಜಿ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು. ಬೈಕ್ ಟ್ಯಾಕ್ಸಿಗಳ ಪರ್ಮಿಟ್ ನಿಮ್ಮ ರೂಪಿಸಲು ಸರ್ಕಾರ ಸಿದ್ಧವಿಲ್ಲ 8 ರಾಜ್ಯಗಳಲ್ಲಿ ಮಾತ್ರ ಬೈಕ್ ಟ್ಯಾಕ್ಸಿಗೆ ಪರ್ಮಿಟ್ ನೀಡಲಾಗಿದೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಅನುಮತಿ ನೀಡಲಾಗಿಲ್ಲ. ಕರ್ನಾಟಕದಲ್ಲಿ ಸರ್ಕಾರ ಬೈಕ್ ಟ್ಯಾಕ್ಸಿಗೆ ಪೆರ್ಮಿಟ್ ನೀಡಿಲ್ಲ 4 ವರ್ಷಗಳಿಂದ ಮಧ್ಯಂತರ ಆದೇಶದ ಮೇಲೆ ಬೈಕ್ ಟ್ಯಾಕ್ಸಿ ನಡೆಯುತ್ತಿದೆ ಸುಪ್ರೀಂಕೋರ್ಟ್ ಕೂಡ ಮಧ್ಯಂತರ ಆದೇಶ ನಿರಾಕರಿಸಿದೆ ಎಂದು ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.
ಅಲ್ಲದೆ, ಬೈಕ್ ಟ್ಯಾಕ್ಸಿಗಳ ಸೇವೆ ಕಾರ್ಯಚರಣೆ ಮುಂದುವರೆಸುವ ಸಂಬಂಧ ಮದ್ಯಂತರ ಪರಿಹಾರ ನೀಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಲು ನಿಯಮಗಳನ್ನು ರೂಪಿಸುವಂತಿದ್ದರೆ, ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂಬುದಾಗಿ ಹೇಳಬಹುದಾಗಿತ್ತು. ಆದರೆ, ಸರ್ಕಾರ ನಿಯಮಗಳನ್ನು ರೂಪಿಸುತ್ತಿಲ್ಲಎಂದು ತಿಳಿಸಿದೆ. ಹೀಗಾಗಿ, ಮಧ್ಯಂತರ ಪರಿಹಾರ ನೀಡಲಾಗದು ಎಂದು ಪೀಠ ಹೇಳಿದೆ.
ನ್ಯಾಯಪೀಠದ ಈ ಅಭಿಪ್ರಾಯದಿಂದ ರಾಜ್ಯದಲ್ಲಿ ಜೂನ್ 15ರ ನಂತರ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮುಂದುವರೆಯುವುದೇ ಎಂಬ ಅನುಮಾನ ಮೂಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಸೇವೆ ಸ್ಥಗಿತಗೊಳಿಸಲು ನಿರ್ದೇಶನ ನೀಡಿರುವ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎನ್ಐ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್(ಓಲಾ), ವರ್ಕುಟಿ ಮಹೇಂದ್ರ ರೆಡ್ಡಿ(ಬೈಕ್ ಟ್ಯಾಕ್ಸಿಗಳ ಮಾಲೀಕರು) ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ಪೀಠದ ಮುಂದೆ ಬಂದಿತ್ತು.
ವಿಚಾರಣೆ ವೇಳೆ ಸರ್ಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ನಾಲ್ಕು ಚಕ್ರದ ವಾಹನಗಳು ಮತ್ತು ಮೂರು ಚಕ್ರದ ವಾಹನಗಳು ಅನುಮತಿ ಪಡೆದು ತೆರಿಗೆ ಪಾವತಿಸಿ ಬಾಡಿಗೆ ವಾಹನಗಳಾಗಿ ನಿರ್ವಹಿಸುತ್ತಿವೆ. ದ್ವಿಚಕ್ರವಾಹನಗಳು ಹಾಗೂ ದೊಡ್ಡ ವಾಹನಗಳನ್ನು ಸಂಚಾರ ದಟ್ಟಣೆಯಲ್ಲಿ ಚಲಾಯಿಸುವುದು ವಿಭಿನ್ನವಾಗಿರಲಿದೆ. ದ್ವಿಚಕ್ರವಾಹನಗಳನ್ನು ಬಾಡಿಗೆ ವಾಹನಗಳಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಇಡೀ ದೇಶದಲ್ಲಿ 8 ರಾಜ್ಯಗಳಲ್ಲಿ ಮಾತ್ರ ಅನುಮತಿ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.