ತಿರುವನಂತಪುರಂ:ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು (ಮೇ 4) ನಡೆಯಲಿದ್ದು, ಫಲಿತಾಂಶ ಹೊರಬೀಳುವ ಮುನ್ನವೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದ್ದಾರೆ. ಎಕ್ಸಿಟ್ ಪೋಲ್ ಫಲಿತಾಂಶಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದುವರೆಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ “ಕೇರಳದ ಮುಖ್ಯಮಂತ್ರಿ” ಎಂದು ಹಾಕಿಕೊಂಡಿದ್ದ ಪಿಣರಾಯಿ ವಿಜಯನ್, ಈಗ ಆ ಸ್ಥಾನಕ್ಕೆ ಬದಲಾಗಿ ತಮ್ಮ ವೈಯಕ್ತಿಕ ಪರಿಚಯ ಅಥವಾ ಪಕ್ಷದ ಜವಾಬ್ದಾರಿಯನ್ನು ಮಾತ್ರ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಫಲಿತಾಂಶದ ಮೊದಲೆ ಈ ರೀತಿ ಬಯೋ ಬದಲಿಸಿರುವುದು ಅವರು ಸೋಲನ್ನು ಮುನ್ಸೂಚನೆಯಾಗಿ ಒಪ್ಪಿಕೊಂಡಿದ್ದಾರೆಯೇ ಅಥವಾ ಹೊಸ ರಾಜಕೀಯ ತಂತ್ರದ ಭಾಗವೇ ಎಂಬ ಚರ್ಚೆ ಶುರುವಾಗಿದೆ.
ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಈ ಬಾರಿ ಕೇರಳದಲ್ಲಿ ಅಧಿಕಾರ ಬದಲಾವಣೆಯಾಗಲಿದೆ ಎಂದು ಹೇಳಿವೆ. ಆಡಳಿತಾರೂಢ ಎಲ್‌ಡಿಎಫ್ (LDF) ಗೆ ಹಿನ್ನಡೆಯಾಗಲಿದ್ದು, ಯುಡಿಎಫ್ (UDF) ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಭವಿಷ್ಯವಾಣಿಯು ಸಿಪಿಎಂ ಪಾಳಯದಲ್ಲಿ ಆತಂಕ ಮೂಡಿಸಿದ್ದರೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ.








