ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದಾರೆ.
ಕರ್ನಾಟಕ ದಲಿತ ಸಂಘಟನಾ ಸಮಿತಿ ವತಿಯಿಂದ ಇಂದು (11.06.2026) ಬೆಳಗ್ಗೆ 08:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ. ಹೀಗಾಗಿ ವಾಹನ ಸವಾರರು ಕೆಳಕಂಡ ಸಂಚಾರ ಬದಲಾವಣೆಗಳನ್ನು ಗಮನಿಸಬೇಕಾಗಿ ಕೋರಲಾಗಿದೆ.
ಪ್ರಮುಖ ಸಂಚಾರ ಬದಲಾವಣೆಗಳು ಮತ್ತು ಪರ್ಯಾಯ ಮಾರ್ಗಗಳು:
ಮಹಾರಾಣಿ ಅಂಡರ್ ಪಾಸ್ ರಸ್ತೆ ಬಳಕೆ ಕಡ್ಡಾಯ: ಕೆ.ಜಿ. ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲ ತಿರುವು ಪಡೆದು ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ಕ್ರಾಸ್ ರಸ್ತೆಯ ಮಹಾರಾಣಿ ಅಂಡರ್ ಪಾಸ್ ರಸ್ತೆಯನ್ನು ಬಳಸಬೇಕಾಗುತ್ತದೆ.
ಸಂಚಾರ ನಿಷೇಧ: ಫ್ರೀಡಂ ಪಾರ್ಕ್ ಜಂಕ್ಷನ್ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಈ ರಸ್ತೆಯಲ್ಲಿ ಸದ್ಯಕ್ಕೆ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.
ಹಳೇ ಜೆ.ಡಿ.ಎಸ್ ಕಚೇರಿ ರಸ್ತೆ ಬಳಸಿ: ಖೋದೇ ಜಂಕ್ಷನ್ ಕಡೆಯಿಂದ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ಫ್ಲೈಓವರ್ ರಸ್ತೆಯಲ್ಲಿ, ರೈಲ್ವೇ ನಿಲ್ದಾಣದಿಂದ ಪ್ರತಿಭಟನಾಕಾರರು ಕಾಲ್ನಡಿಗೆಯಲ್ಲಿ ಬರುವುದರಿಂದ ವಾಹನ ದಟ್ಟಣೆ ಉಂಟಾಗಬಹುದು. ಇದನ್ನು ತಡೆಗಟ್ಟಲು ಸವಾರರು ಹಳೇ ಜೆ.ಡಿ.ಎಸ್ ಕಚೇರಿ ರಸ್ತೆಯನ್ನು ಬಳಸಬಹುದಾಗಿದೆ.
ದ್ವಿಮುಖ ಸಂಚಾರಕ್ಕೆ ಅವಕಾಶ: ಸುಬ್ಬಣ್ಣ ಜಂಕ್ಷನ್ನಿಂದ ಎಂ.ಟಿ.ಆರ್ ಜಂಕ್ಷನ್ ಕಡೆಗೆ ಬರುವ ಏಕಮುಖ ಸಂಚಾರದ ರಸ್ತೆಯನ್ನು ತಾತ್ಕಾಲಿಕವಾಗಿ ದ್ವಿಮುಖ (Two-way) ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಗಾಂಧಿನಗರ ಕಡೆಗೆ ಬರುವ ವಾಹನ ಸವಾರರು ಈ ರಸ್ತೆಯನ್ನು ಬಳಸಬಹುದು.
ಪಾರ್ಕಿಂಗ್ ನಿಷೇಧಿತ ರಸ್ತೆಗಳು:
ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಕೆಳಕಂಡ ರಸ್ತೆಗಳಲ್ಲಿ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್ಗೆ ಅವಕಾಶವಿರುವುದಿಲ್ಲ:
ಖೋದೇ ಜಂಕ್ಷನ್ನಿಂದ ಮಹಾರಾಣಿ ಜಂಕ್ಷನ್ವರೆಗೆ
ವೈ. ರಾಮಚಂದ್ರ ರಸ್ತೆ
ಕಾಳಿದಾಸ ರಸ್ತೆ
ಪ್ಯಾಲೇಸ್ ರಸ್ತೆ
ಕೆ.ಜಿ. ರಸ್ತೆ
ಗಮನಿಸಿ: ಸಾರ್ವಜನಿಕರು ಹಾಗೂ ವಾಹನ ಸವಾರರು ಈ ಸಂಚಾರ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕಾಗಿ ಮತ್ತು ಪೊಲೀಸರೊಂದಿಗೆ ಸಹಕರಿಸಬೇಕಾಗಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ವಿನಂತಿಸಿದೆ.
"ಸಂಚಾರ ಸಲಹೆ"/"Traffic advisory" pic.twitter.com/KytxNgvKQR
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 10, 2026








