ನವದೆಹಲಿ:ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಆರಂಭವಾಗಿದ್ದು, 823 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಇಂದು ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟವಾಗಲಿದೆ.
ದೇಶದ ರಾಜಕೀಯ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಇಂದು (ಸೋಮವಾರ) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಮಧ್ಯಾಹ್ನ ಅಥವಾ ಸಂಜೆಯ ಹೊತ್ತಿಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ರಾಜ್ಯವಾರು ಕುತೂಹಲದ ಅಂಶಗಳು:
ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಬಿಜೆಪಿ ಭೇದಿಸುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇಲ್ಲಿ ಒಟ್ಟು 294 ಸ್ಥಾನಗಳಿದ್ದು, ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ.
ತಮಿಳುನಾಡು: ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಗೆ ಪಳನಿಸ್ವಾಮಿ ಹಾಗೂ ವಿಜಯ್ ಅವರ ಪಕ್ಷಗಳು ಹೇಗೆ ಪೈಪೋಟಿ ನೀಡಲಿವೆ ಎಂಬುದು ಕುತೂಹಲ ಮೂಡಿಸಿದೆ. ಒಟ್ಟು 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕು.
ಕೇರಳ: ಎಲ್‌ಡಿಎಫ್, ಯುಡಿಎಫ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 140 ಸ್ಥಾನಗಳಲ್ಲಿ ಅಧಿಕಾರ ಹಿಡಿಯಲು 71 ಸ್ಥಾನಗಳ ಅವಶ್ಯಕತೆಯಿದೆ.
ಅಸ್ಸಾಂ: ಬಿಜೆಪಿ ಇಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ನಗೆ ಬೀರಲು ಸಜ್ಜಾಗಿದ್ದರೆ, ಕಾಂಗ್ರೆಸ್ ಅಧಿಕಾರ ಕಸಿದುಕೊಳ್ಳುವ ತವಕದಲ್ಲಿದೆ. 126 ಸ್ಥಾನಗಳಲ್ಲಿ 64 ಸ್ಥಾನ ಗೆದ್ದವರು ಬಹುಮತ ಪಡೆಯಲಿದ್ದಾರೆ.
ಪುದುಚೇರಿ: ಇಲ್ಲಿ ರಂಗಸ್ವಾಮಿ ನೇತೃತ್ವದ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಹಣಾಹಣಿ ಇದ್ದು, ಒಟ್ಟು 30 ಸ್ಥಾನಗಳಲ್ಲಿ 16 ಸ್ಥಾನಗಳ ಬಹುಮತ ಬೇಕಾಗಿದೆ.
ದಾವಣಗೆರೆ, ಬಾಗಲಕೋಟೆ ಉಪಚುನಾವಣೆ: ಯಾರ ಮಡಿಲಿಗೆ ಜಯ?
ರಾಜ್ಯದ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯೂ ಇಂದು ನಡೆಯಲಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ಎಣಿಕಾ ಕೇಂದ್ರ: ದಾವಣಗೆರೆ ಜಿಲ್ಲೆಯ ಮತಗಳ ಎಣಿಕೆ ಡಿ.ಆರ್.ಆರ್. ವಿದ್ಯಾಸಂಸ್ಥೆಯಲ್ಲಿ ಹಾಗೂ ಬಾಗಲಕೋಟೆ ಕ್ಷೇತ್ರದ ಮತಗಳ ಎಣಿಕೆ ನಗರದ ತೋಟಗಾರಿಕೆ ವಿವಿಯಲ್ಲಿ ನಡೆಯಲಿದೆ.
ಭದ್ರತೆ: ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.







