ಬೆಂಗಲೂರು : ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ “ಜೀರೋ ಟ್ರಾಫಿಕ್” ಕಾರು ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಂದು (ಭಾನುವಾರ) ಬೆಳಗ್ಗೆ 9.00 ಗಂಟೆಗೆ ಅವರು ವಿಧಾನಸೌಧದ ಎದುರಿನ ಮೆಟ್ರೋ ಸ್ಟೇಷನ್ನಿಂದ ಕನಕಪುರ ರಸ್ತೆಯ ಕೊನೆಯ ಮೆಟ್ರೋ ಸ್ಟೇಷನ್ವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಲಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.00 ರವರೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಹಾಗೂ ಕನಕಪುರ ತಾಲೂಕಿನ ವಿವಿಧೆಡೆ ಮತದಾರರಿಗೆ ಮತ್ತು ಜನತೆಗೆ ಕೃತಜ್ಞತೆ ಸಲ್ಲಿಸಲು ‘ಕೃತಜ್ಞತೆ ಸಮರ್ಪಣಾ ಪ್ರವಾಸ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಿಂದ ಕನಕಪುರ ರಸ್ತೆಯವರೆಗೂ ಜೀರೋ ಟ್ರಾಫಿಕ್ ವ್ಯವಸ್ಥೆಯಡಿ ಕಾರಿನಲ್ಲಿ ಪ್ರಯಾಣಿಸಿದರೆ ಸಾರ್ವಜನಿಕರ ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡ ಸಿಎಂ, ಜನಸಾಮಾನ್ಯರಿಗೆ ಕಿರಿಕಿರಿ ತಪ್ಪಿಸಲು ಈ ಬಾರಿ ನಮ್ಮ ಮೆಟ್ರೋ ರೈಲನ್ನು ಬಳಸಲು ನಿರ್ಧರಿಸಿದ್ದಾರೆ.








