ನವದೆಹಲಿ: ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಯಾಂತ್ರಿಕ ರೀತಿಯಲ್ಲಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಆದೇಶವನ್ನು ತಳ್ಳಿಹಾಕಿದೆ.
ಪ್ರಕರಣದ ಆರೋಪಗಳ ಗಂಭೀರತೆ ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವಲ್ಲಿ ಪಾಟ್ನಾ ಹೈಕೋರ್ಟ್ ಸ್ಪಷ್ಟವಾಗಿ ವಿಫಲವಾಗಿದೆ ಎಂದು ಗಮನಿಸಿದ ನ್ಯಾಯಾಲಯ, ಆರೋಪಿಗಳು ಎಂಟು ವಾರಗಳಲ್ಲಿ ಶರಣಾಗಬೇಕು ಎಂದು ನಿರ್ದೇಶನ ನೀಡಿತು. ಈ ನಾಲ್ವರಿಗೆ ನಿರೀಕ್ಷಣಾ ಜಾಮೀನು ನೀಡಿದ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತೆಯ ಮಗ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ.
“ಐಪಿಸಿಯ ಸೆಕ್ಷನ್ 302 (ಕೊಲೆ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಗಂಭೀರ ಅಪರಾಧಗಳನ್ನು ಒಳಗೊಂಡ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ (ಪಾಟ್ನಾ) ಆದೇಶವು ಯಾವುದೇ ಕಾರಣವನ್ನು ಬಹಿರಂಗಪಡಿಸುವುದಿಲ್ಲ” ಎಂದು ನ್ಯಾಯಪೀಠ ಹೇಳಿದೆ