ರಾಮನಗರ : ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.ಆದರೆ ಮೂರೂ ಕ್ಷೇತ್ರಗಳ ಪೈಕಿ ಹೈ ವೋಲ್ಟೇಜ್ ಕಣವಾಗಿ ಚನ್ನಪಟ್ಟಣ ಕ್ಷೇತ್ರ ಗಮನ ಸೆಳೆದಿದೆ. ಇದೀಗ ಫಲಿತಾಂಶಕ್ಕೂ ಮುನ್ನ ಚೆನ್ನಪಟ್ಟಣ ಕ್ಷೇತ್ರದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದ್ದು ಜನರು ಭೂಮಿ ಕುರಿ ಕೋಳಿ ಜಾನುವಾರುಗಳನ್ನು ಅಡವಿಟ್ಟಿದ್ದಾರೆ.
ಹೌದು NDA ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು ಸ್ಪರ್ಧೆ ಮಾಡಿದ್ದಾರೆ. ಇನ್ನು ಉಪಚುನಾವಣೆಗೂ ಮುನ್ನ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಿಪಿ ಯೋಗೇಶ್ವರ್ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರಿಬ್ಬರ ಮಧ್ಯ ಇದೀಗ ಜನರು ಬೆಟ್ಟಿಂಗ್ ನಡೆಸಿದ್ದಾರೆ.ಈ ಬೆಟ್ಟಿಂಗ್ ದಂಧೆ ಬರೀ ಚನ್ನಪಟ್ಟಣದ ವ್ಯಾಪ್ತಿಯಲ್ಲಷ್ಟೇ ನಡೆಯುತ್ತಿಲ್ಲ, ಬದಲಿಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪಿಸಿದೆ.
ಬುಕ್ಕಿಂಗ್ ಟ್ರೆಂಡ್ ಪ್ರಕಾರ ಸ್ಥಳೀಯರಿಗೆ ಸಿಪಿ. ಯೋಗೀಶ್ವರ್ ಗೆಲ್ಲುವ ಕಂಟೆಸ್ಟೆಂಟ್ ಆಗಿದ್ರೆ ಹೊರಗಿನವರಿಗೆ ನಿಖಿಲ್ ಕುಮಾರಸ್ವಾಮಿ ಆಗಿದ್ದಾರೆ. ಬೆಟ್ಟಿಂಗ್ ಕಟ್ಟುವವರು ಸಹ ರಾಜಕೀಯ, ಮಾಧ್ಯಮ ಹಾಗೂ ಸಮೀಕ್ಷೆಗಳ ಮೂಲವನ್ನು ಪರೀಕ್ಷಿಸಿ, ಗೆಲುವಿನ ಅದೃಷ್ಟದ ಮೇಲೆ ಕೋಟಿ ಕೋಟಿ ಹೂಡಿಕೆ ಮಾಡುತ್ತಿದ್ದಾರೆ. ಹಣ ಮಾತ್ರವಲ್ಲ ತಮ್ಮ ತಮ್ಮ ಜಮೀನುಗಳನ್ನು ಬರೆದಿಡುತ್ತಿದ್ದಾರೆ.
ಬೆಟ್ಟಿಂಗ್‌ನಲ್ಲಿ ತೊಡಗಿರುವ ಕೆಲವರು ಬೆಟ್ ಕಟ್ಟುವ ಮೊದಲು ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ವಿಶ್ಲೇಷಕರು, ರಾಜಕೀಯ ಕಾರ್ಯಕರ್ತರಿಗೆ ಫೋನಾಯಿಸಿ ಯಾರು ಗೆಲ್ಲಬಹುದು ಎಂಬ ಟಿಪ್ಸ್ ಪಡೆಯುತ್ತಿದ್ದಾರೆ. ಈ ಮೊದಲು ಯಾವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೋ ಈಗಲೂ ಅದೇ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಆಧಾರದ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ.