ತೆಹ್ರಾನ್: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಹಾಗೂ ಪ್ರಭಾವಿ ನಾಯಕ ಮೊಜ್ತಬಾ ಖಮೇನಿ (Mojtaba Khamenei), ಪರ್ಷಿಯನ್ ಗಲ್ಫ್‌ನ ಭವಿಷ್ಯದ ಕುರಿತು ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಪರ್ಷಿಯನ್ ಗಲ್ಫ್ ಪ್ರದೇಶವು ಅಮೆರಿಕದ ಉಪಸ್ಥಿತಿಯಿಂದ ಮುಕ್ತವಾದಾಗ ಮಾತ್ರ ಅಲ್ಲಿ ಉಜ್ವಲ ಭವಿಷ್ಯ ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿಯು ಅಸ್ಥಿರತೆಗೆ ಮುಖ್ಯ ಕಾರಣ. ಈ ಪ್ರದೇಶದ ಸಂಪನ್ಮೂಲ ಮತ್ತು ಭದ್ರತೆಯನ್ನು ಸ್ಥಳೀಯ ದೇಶಗಳೇ ನಿರ್ಧರಿಸಬೇಕು ಹೊರತು ಹೊರಗಿನ ಶಕ್ತಿಗಳಲ್ಲ ಎಂದು ಮೊಜ್ತಬಾ ಹೇಳಿದ್ದಾರೆ.
ಅಮೆರಿಕದೊಂದಿಗೆ ನಡೆಯುತ್ತಿದ್ದ ರಾಜತಾಂತ್ರಿಕ ಮಾತುಕತೆಗಳು ಹಳಿತಪ್ಪುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ಇರಾನ್ ತನ್ನ ಕಠಿಣ ನಿಲುವನ್ನು ಮುಂದುವರಿಸುವ ಸೂಚನೆ ನೀಡಿದೆ.
ಅರಬ್ ರಾಷ್ಟ್ರಗಳು ಅಮೆರಿಕದ ಮೇಲಿನ ಅವಲಂಬನೆಯನ್ನು ಬಿಟ್ಟು, ಪ್ರಾದೇಶಿಕ ಭದ್ರತೆಗಾಗಿ ಇರಾನ್‌ನೊಂದಿಗೆ ಕೈಜೋಡಿಸಬೇಕು. ಆಗ ಮಾತ್ರ ಈ ಭಾಗದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಕರೆ ನೀಡಿದ್ದಾರೆ.








