ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಹೊರಬಿದ್ದಿರುವ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಾಖಂಡಿತವಾಗಿ ತಳ್ಳಿಹಾಕಿದ್ದಾರೆ. “ಇವು ಜನಸಾಮಾನ್ಯರ ಸಮೀಕ್ಷೆಗಳಲ್ಲ, ಬದಲಿಗೆ ಬಿಜೆಪಿ ಕಚೇರಿಯಲ್ಲಿ ತಯಾರಾದ ಅಂಕಿಅಂಶಗಳು” ಎಂದು ಅವರು ಕಿಡಿಕಾರಿದ್ದಾರೆ.
ಎಕ್ಸಿಟ್ ಪೋಲ್ ಭವಿಷ್ಯಗಳು ಬಿಜೆಪಿಯ ಸೂಚನೆಯ ಮೇರೆಗೆ ತಯಾರಾಗಿವೆ. ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಮತ್ತು ಶೇರು ಮಾರುಕಟ್ಟೆಯನ್ನು ಸಮಾಧಾನಪಡಿಸಲು ಇಂತಹ ‘ಹೊಸೆದ’ ಅಂಕಿಅಂಶಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.
ಬಹುತೇಕ ಸಮೀಕ್ಷೆಗಳು ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ಪೈಪೋಟಿ ಅಥವಾ ಬಿಜೆಪಿಗೆ ಮುನ್ನಡೆ ನೀಡಿವೆ. ಆದರೆ ಮಮತಾ ಬ್ಯಾನರ್ಜಿ ಮಾತ್ರ, “ನಾವು ಈ ಬಾರಿ 226ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆ ಕೇಂದ್ರಗಳಲ್ಲಿ ಮತ್ತು ಸ್ಟ್ರಾಂಗ್ ರೂಂಗಳ ಬಳಿ ಹೆಚ್ಚಿನ ಜಾಗರೂಕತೆಯಿಂದ ಇರುವಂತೆ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇವಿಎಂ (EVM) ಯಂತ್ರಗಳಲ್ಲಿ ಅಕ್ರಮ ನಡೆಯದಂತೆ ಕಣ್ಗಾವಲು ಇಡಲು ಸೂಚಿಸಿದ್ದಾರೆ.
ಕೇಂದ್ರದ ಭದ್ರತಾ ಪಡೆಗಳನ್ನು ಅಮಿತ್ ಶಾ ಅವರ ಸೂಚನೆಯಂತೆ ಬಿಜೆಪಿ ಏಜೆಂಟ್‌ಗಳಂತೆ ಬಳಸಿಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.








