ಗದಗ: ಲೋಕಾಯುಕ್ತ ದಾಳಿ ಹಾಗೂ ವರ್ಗಾವಣೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು (ಪಿಡಿಒ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಮಕ್ತುಂಹುಸೇನ್ ಕರಡಿಗುಡ್ಡ (46) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ರೋಣ ತಾಲ್ಲೂಕಿನ ಕೊತಬಾಳ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಘಟನೆಯ ಹಿನ್ನೆಲೆ:
-
ಲೋಕಾಯುಕ್ತ ದಾಳಿ: ಮೂಲತಃ ಧಾರವಾಡ ಜಿಲ್ಲೆಯವರಾದ ಮಕ್ತುಂಹುಸೇನ್ ಅವರ ಮನೆ ಮೇಲೆ 2022-23ನೇ ಸಾಲಿನಲ್ಲಿ ಲೋಕಾಯುಕ್ತ ದಾಳಿ ನಡೆದಿತ್ತು.
-
ಅಮಾನತು ಮತ್ತು ವರ್ಗಾವಣೆ: ದಾಳಿಯ ನಂತರ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ಅಮಾನತು ರದ್ದಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇವರನ್ನು ಗದಗ ಜಿಲ್ಲೆಗೆ ನಿಯೋಜನೆ ಮಾಡಿತ್ತು.
-
ಹೊಸ ಜವಾಬ್ದಾರಿ: ಕಳೆದ ತಿಂಗಳಷ್ಟೇ ಇವರು ಕೊತಬಾಳ ಗ್ರಾಮ ಪಂಚಾಯ್ತಿಯ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಲೋಕಾಯುಕ್ತ ದಾಳಿಯ ಕಳಂಕ ಮತ್ತು ವರ್ಗಾವಣೆಯಿಂದಾಗಿ ಅವರು ತೀವ್ರವಾಗಿ ಮನನೊಂದು ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗಿದೆ.
ಘಟನೆ ಬಯಲಿಗೆ ಬಂದಿದ್ದು ಹೇಗೆ?:
ಮಕ್ತುಂಹುಸೇನ್ ಅವರು ರೋಣ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಮಂಗಳವಾರ ರಾತ್ರಿಯಿಂದಲೇ ಅವರು ಪತ್ನಿಯ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಕಳೆದ ಎರಡು ದಿನಗಳಿಂದ ಸತತವಾಗಿ ಕರೆ ಮಾಡಿದರೂ ಪತಿ ಪೋನ್ ಎತ್ತದಿದ್ದಾಗ ಆತಂಕಗೊಂಡ ಪತ್ನಿ, ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಲೀಕರು ಮನೆಗೆ ಹೋಗಿ ಪರಿಶೀಲಿಸಿದಾಗ ಮಕ್ತುಂಹುಸೇನ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ರೋಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
BREAKING: ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ: ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ಧರಾಮಯ್ಯ ಆದೇಶ
ಡಾ. ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಪಾಲಿಸುವುದು ನಮ್ಮೆಲ್ಲರ ಹೊಣೆ: ಮಾಜಿ ಸಚಿವ ಹರತಾಳು ಹಾಲಪ್ಪ








